ಉಳ್ಳಾಲ: ಕೋಟೆಪುರದ ಫಿಶ್ ಮೀಲ್ ಫ್ಯಾಕ್ಟರಿಯಿಂದ ಮೀನಿನ ಎಣ್ಣೆ ಹೊತ್ತೊಯ್ಯುತ್ತಿದ್ದ ಕ್ಯಾಂಟರ್ ತಾಂತ್ರಿಕ ದೋಷದಿಂದ ಭಾರೀ ಪ್ರಮಾಣದ ಮೀನಿನ ಎಣ್ಣೆ ಉಳ್ಳಾಲದ ರಸ್ತೆಯಲ್ಲಿ ಸೋರಿಕೆಯಾಗಿ ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದು ಗಾಯಗೊಂಡಿದ್ದು, ಇದರಿಂದ ಆಕ್ರೋಶಗೊಂಡ ಸ್ಥಳೀಯರು ಮೀನಿನ ಕ್ಯಾಂಟರನ್ನ ತಡೆದು ಪ್ರತಿಭಟನೆ ನಡೆಸಿದ ಘಟನೆ ಗುರುವಾರ ರಾತ್ರಿ ಉಳ್ಳಾಲ ಬೈಲಿನಲ್ಲಿ ನಡೆದಿದೆ.
ಉಳ್ಳಾಲ ಕೋಟೆಪುರದಲ್ಲಿ ನಾಯಿಕೊಡೆಗಳಂತೆ ಫಿಶ್ ಮೀಲ್ ಫ್ಯಾಕ್ಟರಿಗಳು ತಲೆ ಎತ್ತಿದ್ದು ಉಳ್ಳಾಲ ನಗರವನ್ನ ಅನಧಿಕೃತ ಕೈಗಾರಿಕಾ ಪ್ರದೇಶವನ್ನಾಗಿಸಿದೆ. ಇಂದು ರಾತ್ರಿ ಕೋಟೆಪುರದಿಂದ ಮಂಗಳೂರು ಬಂದರಿಗೆ ಫಿಶ್ ಮೀಲ್ ಆಯಿಲನ್ನು ಹೊತ್ಯೊಯ್ಯುತ್ತಿದ್ದ ಬೃಹತ್ ಕ್ಯಾಂಟರ್ ಒಂದರಿಂದ ತಾಂತ್ರಿಕ ದೋಷದಿಂದಾಗಿ ಭಾರೀ ಪ್ರಮಾಣದ ಫಿಶ್ ಆಯಿಲ್ ರಸ್ತೆಯಲ್ಲೇ ಸೋರಿಕೆಯಾಗಿದೆ. ಉಳ್ಳಾಲ ಅಬ್ಬಕ್ಕ ಸರ್ಕಲ್ ನಿಂದ ಉಳ್ಳಾಲ ಬೈಲ್ ವರೆಗೂ ಫಿಶ್ ಆಯಿಲ್ ಸೋರಿಕೆಯಾಗಿದ್ದು ದ್ವಿಚಕ್ರ ವಾಹನ ಸವಾರರಲ್ಲದೆ, ತ್ರಿಚಕ್ರ ವಾಹನ ಸವಾರರು ಕೂಡ ರಸ್ತೆಯಲ್ಲಿ ಜಾರಿ ಬಿದ್ದಿದ್ದಾರೆ.

ಉದ್ರಿಕ್ತ ಸ್ಥಳೀಯರು ಫಿಶ್ ಮೀಲ್ ಆಯಿಲ್ ಸಾಗಿಸುತ್ತಿದ್ದ ಕ್ಯಾಂಟರನ್ನ ಉಳ್ಳಾಲ ಬೈಲಿನಲ್ಲಿ ಅಡ್ಡ ಹಾಕಿ ತಡೆದು ನಿಲ್ಲಿಸಿ ಪ್ರತಿಭಟಿಸಿದ್ದಾರೆ. ಕ್ಯಾಂಟರಿಂದ ಲಕ್ಷಗಟ್ಟಲೆ ಮೌಲ್ಯದ ಆಯಿಲ್ ಸೋರಿಕೆಯಾಗುತ್ತಲೇ ಇದ್ದು ಆಯಿಲನ್ನು ಬೇರೊಂದು ಕ್ಯಾಂಟರ್ ಗೆ ತುಂಬಿಸಲಾಗುತ್ತಿದೆ. ಘಟನೆಯಿಂದ ಉಳ್ಳಾಲ ಅಬ್ಬಕ್ಕ ಸರ್ಕಲ್ ನಿಂದ ಉಳ್ಳಾಲ ಬೈಲ್ ತನಕ ಏಕಮುಖ ರಸ್ತೆಯ ಸಂಚಾರ ಸ್ಥಗಿತಗೊಳಿಸಲಾಗಿದೆ. ರಸ್ತೆಯುದ್ದಕ್ಕೂ ಸೋರಿಕೆಯಾಗಿರುವ ಭಾರೀ ಜಿಡ್ಡಿನ ಫಿಶ್ ಆಯಿಲನ್ನ ಶುದ್ಧಗೊಳಿಸುವುದು ಹೇಗೆಂದು ಪೊಲೀಸರು ಜನಸಾಮಾನ್ಯರಲ್ಲಿ ವಿಚಾರಿಸುತ್ತಿದ್ದಾರೆ.
ಉಳ್ಳಾಲ ನಗರ ಪ್ರದೇಶದಲ್ಲಿ ತಲೆ ಎತ್ತಿರುವ ಅನಧಿಕೃತ ಫಿಶ್ ಮೀಲ್ ಫ್ಯಾಕ್ಟರಿಗಳಿಂದ ಇಲ್ಲಿನ ಜನರು ದಿನ ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ. ಫ್ಯಾಕ್ಟರಿಗಳ ಗಬ್ಬು ವಾಸನೆ ಉಳ್ಳಾಲ ಮಾತ್ರವಲ್ಲದೆ ಸಮೀಪದ ಮಂಗಳಾದೇವಿ ಪರಿಸರಕ್ಕೂ ವ್ಯಾಪಿಸಿದೆ. ಇದೀಗ ಭಾರೀ ಪ್ರಮಾಣದಲ್ಲಿ ರಸ್ತೆಯಲ್ಲಿ ಫಿಶ್ ಮೀಲ್ ಆಯಿಲ್ ಸೋರಿಕೆಯಾಗಿರುವುದರಿಂದ ಇಡೀ ಉಳ್ಳಾಲವೇ ಗಬ್ಬು ನಾರುವಂತಾಗಿದೆ.


ಸೂಕ್ತ ಕಾನೂನು ಕ್ರಮಕೈಗೊಳ್ಳಲು ಸ್ಪೀಕರ್ ಯುಟಿ ಖಾದರ್ ಸೂಚನೆ: ಉಳ್ಳಾಲದ ರಸ್ತೆಯಲ್ಲಿ ಫಿಶ್‌ಮಿಲ್ ಲಾರಿಯಿಂದ ಸೋರಿಕೆಯಾದ ಮೀನಿನ ಎಣ್ಣೆಯ ಮೇಲೆ ಸಂಚರಿಸಿದ ದ್ವಿಚಕ್ರ ವಾಹನಗಳು ಉರುಳಿ ಬಿದ್ದು, ವಾಹನ ಸವಾರರು ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಪೀಕರ್ ಹಾಗೂ ಸ್ಥಳೀಯ ಶಾಸಕ ಯು.ಟಿ.ಖಾದರ್ ಅವರು ಮಂಗಳೂರು ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ. ಅಪಘಾತದಿಂದಾಗಿ ಗಾಯಗೊಂಡ ದ್ವಿಚಕ್ರ ವಾಹನ ಸವಾರರಿಗೆ ಸೂಕ್ತ ಪರಿಹಾರವನ್ನು ಫಿಶ್‌ಮಿಲ್‌ನವರು ನೀಡಬೇಕು ಎಂದು ಖಾದರ್ ಹೇಳಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post