ಮಂಗಳೂರು, ಆ 15 : ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸಿ ಜಿಲ್ಲಾಡಳಿತದ ವತಿಯಿಂದ ನಗರದ ನೆಹರೂ ಕ್ರೀಡಾಂಗಣದಲ್ಲಿ ಆ.15ರ ಭಾನುವಾರ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.
ಈ ವೇಳೆ ಮಾತನಾಡಿದ ಅವರು, “ಮೊಟ್ಟ ಮೊದಲಿಗೆ ನಾನು ನಮ್ಮ ರಾಷ್ಟ್ರದ ಸ್ವಾತಂತ್ರ್ಯ ಹೋರಾಟದಲ್ಲಿ ಸಮರ್ಪಣೆ ಮಾಡಿಕೊಂಡ ಎಲ್ಲಾ ಹಿರಿಯರಿಗೆ ಶಿರಬಾಗಿ ನನ್ನ ನಮನಗಳನ್ನು ಅರ್ಪಿಸಿಕೊಳ್ಳುತ್ತಿದ್ದೇನೆ” ಎಂದರು.
ತುಳುವಿನಲ್ಲಿ 75ನೇ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ, ಕಷ್ಟ-ನಷ್ಟ ಅನುಭವಿಸಿದ ಹಿರಿಯನ್ನು ನೆನಪಿಸಿದರು. ಇತಿಹಾಸವನ್ನು ಮರೆಯದೆ, ರಾಷ್ಟ್ರದ ಸ್ವತಂತ್ರ ಸಾರ್ವಭೌಮ ಜೀವನವನ್ನು ಇನ್ನಷ್ಟು ಶಕ್ತಿಶಾಲಿಯಾಗಿ ಕಟ್ಟುವ ಸುವರ್ಣ ಸಂದರ್ಭ ನಮಗೆ ಬಂದಿದೆ. ಅಮರ ಸುಳ್ಯ ಹೋರಾಟದ ಇತಿಹಾಸವನ್ನೂ ಮರೆಯದಿರೋಣ, ಇಂತಹ ಹೋರಾಟಗಳು ನಮಗೆ ಸ್ಪೂರ್ತಿದಾಯಕ ಎಂದರು.
ಕರೊನಾ ಮೂರನೇ ಅಲೆ ಎದುರಿಸಲು, ಸಿದ್ಧರಾಗುವಂತೆ ತಿಳಿಸಿದ ಅವರು, ದುಡುಕು, ಉದಾಸೀನ ಬಿಟ್ಟು, ಎಚ್ಚೆತ್ತುಕೊಂಡು ತಜ್ಞರು ತಿಳಿಸಿದಂತೆ ಸರ್ಕಾರ ನಿಗದಿಪಡಿಸಿದ ನಿಯಮದಂತೆ ನಡಯುವಂತೆ ಸಾರ್ವಜನಿಕರಿಗೆ ಕಿವಿಮಾತು ಹೇಳಿದರು.
ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಮೇಯರ್ ಪ್ರೇಮಾನಂದ ಶೆಟ್ಟಿ, ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಪಾಲಿಕೆ ಆಯುಕ್ತ ಅಕ್ಷಿ ಶ್ರೀಧರ್ ಮೊದಲಾದವರು ಉಪಸ್ಥಿತರಿದ್ದರು.