ಮಂಗಳೂರು: ಸಂತ ಅಲೋಶಿಯಸ್ ವಸ್ತು ಸಂಗ್ರಹಾಲಯದ ನಾಣ್ಯಗಳ ಗ್ಯಾಲರಿಯನ್ನು ಕಾಲೇಜಿನ ರೆಕ್ಟರ್ ಫಾದರ್ ಮೆಲ್ವಿನ್ ಪಿಂಟೊ ಬುಧವಾರ ಉದ್ಘಾಟಿಸಿದರು.
ನಾಣ್ಯಗಳ ಗ್ಯಾಲರಿಯು ಪ್ರಾಚೀನ ಹಾಗೂ ಅಪರೂಪದ ನಾಣ್ಯಗಳ ಗಣಿಯಾಗಿದೆ. 1913ರಲ್ಲಿ ಇಟಲಿಯ ಕಾಲೇಜಿಯೊ ವಿಡಾ ವಸ್ತು ಸಂಗ್ರಹಾಲಯವನ್ನು ಕೆಡವಿದ ಸಂದರ್ಭದಲ್ಲಿ ಫಾದರ್ ಚಿಯಾಪ್ಪಿ ಅವರು ಅಲ್ಲಿದ್ದ ನಾಣ್ಯಗಳನ್ನು ಇಲ್ಲಿಗೆ ತಂದರು. ಭದ್ರತೆ ಇಲ್ಲದಿರುವುದು ಹಾಗೂ ಗುರುತಿಸಲು ಸಾಧ್ಯವಾಗದ ಕಾರಣ ಈ ನಾಣ್ಯಗಳನ್ನು ಪೆಟ್ಟಿಗೆಗಳಲ್ಲಿ ಸಂಗ್ರಹಿಸಿ ಇಡಲಾಗಿತ್ತು. ಪ್ರಸ್ತುತ ಅವನ್ನು ವಿಂಗಡಿಸಿ, ಗ್ಯಾಲರಿಯಲ್ಲಿ ಪ್ರದರ್ಶಿಸಲಾಗುತ್ತಿದೆ. 82 ದೇಶಗಳ ನಾಣ್ಯಗಳು ಇಲ್ಲಿವೆ.
27 ಯುರೋಪಿಯನ್ ದೇಶಗಳ ಅಪರೂಪದ ನಾಣ್ಯಗಳ ಸಂಗ್ರಹ ಇಲ್ಲಿದೆ. 211 ಬಿ.ಸಿಯ ರೋಮನ್ ಸಾಮ್ರಾಜ್ಯದ ನಾಣ್ಯವನ್ನು ಸಹ ಇಲ್ಲಿ ಕಾಣಬಹುದು. 14ರಿಂದ 18ನೇ ಶತಮಾನಕ್ಕೆ ಸೇರಿದ ವಿವಿಧ ದೇಶಗಳ ಮತ್ತು ರಾಜವಂಶಸ್ಥರ ಕಾಲದ ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ಪ್ರದರ್ಶಿಸಲಾಗಿದೆ.
18ನೇ-19ನೇ ಶತಮಾನಕ್ಕೆ ಸೇರಿದ ಉತ್ತರ ಅಮೆರಿಕ ಹಾಗೂ ದಕ್ಷಿಣ ಅಮೆರಿಕ ದೇಶಗಳ ತಲಾ ಮೂರು ನಾಣ್ಯಗಳು ಇವೆ.
ಏಷ್ಯಾ ಖಂಡದ ವಿವಿಧ ಸಾಮ್ರಾಜ್ಯಗಳು ಮತ್ತು ಅವಧಿಗಳಿಗೆ ಸೇರಿದ 33 ಅಪರೂಪದ ನಾಣ್ಯಗಳನ್ನು ಇಲ್ಲಿ ಕಾಣಬಹುದು. ಸಿಲೋನ್‌ನ ಪೊಲೊನ್ನರುವಾ ಸಾಮ್ರಾಜ್ಯಕ್ಕೆ ಸೇರಿದ ಮಸ್ಸಾ ನಾಣ್ಯಗಳು, ಗಲ್ಫ್ ದೇಶಗಳು, ಆಗ್ನೇಯ ಮತ್ತು ಇತರ ದೇಶಗಳ ಹಳೆಯ ನಾಣ್ಯಗಳು, ಬರೋಡಾ, ಗ್ವಾಲಿಯರ್, ಇಂದೋರ್, ಹೈದರಾಬಾದ್, ಕಚ್, ಮೈಸೂರು, ತಿರುವಾಂಕೂರು ಮುಂತಾದ ಭಾರತೀಯ ರಾಜಪ್ರಭುತ್ವದ ರಾಜ್ಯಗಳ ಅನೇಕ ನಾಣ್ಯಗಳು ಪ್ರದರ್ಶನದಲ್ಲಿವೆ. ಡಚ್, ಡ್ಯಾನಿಶ್, ಪೋರ್ಚುಗೀಸ್, ಬ್ರಿಟಿಷರ ವಸಾಹತುಶಾಹಿ ಕಾಲಕ್ಕೆ ಸೇರಿದ ನಾಣ್ಯ ವೈವಿಧ್ಯ ಅನಾವರಣಗೊಂಡಿದೆ.
ವಸ್ತು ಸಂಗ್ರಹಾಲಯದ ಮುಖ್ಯ ಕೊಠಡಿಯಲ್ಲಿ ಪುರಾತನ ಕಲಾಕೃತಿಗಳು, ಪ್ರಪಂಚದ ಅಪರೂಪದ ವಸ್ತುಗಳು, ಆಫ್ರಿಕನ್ ಕಲಾಕೃತಿಗಳು, ಪುರಾತನ ಪಿಂಗಾಣಿ, ಚಿಪ್ಪುಗಳು, ಪಳೆಯುಳಿಕೆಗಳು, ಅಂಚೆಚೀಟಿಗಳನ್ನು ಸಹ ಇಲ್ಲಿ ವೀಕ್ಷಿಸಬಹುದು.
Discover more from Coastal Times Kannada
Subscribe to get the latest posts sent to your email.
Discussion about this post