ಮಂಗಳೂರು: ವಿವಿಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಠಾಣೆಗಳಲ್ಲಿ ರೌಡಿಶೀಟರ್ ಆಗಿ ಗುರುತಿಸಿಕೊಂಡಿದ್ದ 1,256 ಮಂದಿಯನ್ನು ರೌಡಿ ಪಟ್ಟಿಯಿಂದ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮುಕ್ತಗೊಳಿಸಲಾಗಿದೆ.
ಹಲವು ವರ್ಷಗಳಿಂದ ಅಪರಾಧ ಚಟುವಟಿಕೆಗಳಿಂದ ದೂರ ಉಳಿದು ಉತ್ತಮ ಜೀವನ ರೂಪಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ರೌಡಿಶೀಟರ್ ಪಟ್ಟಿಯಿಂದ ಮುಕ್ತ ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಒಟ್ಟು 3263 ಜನ ರೌಡಿಶೀಟರ್ಗಳಿದ್ದರು. ಅದರಲ್ಲಿ 80 ಜನರು ವಯಸ್ಸಾದವರು. 663 ಮಂದಿಯ ಪ್ರಕರಣಗಳು ಮುಗಿದಿವೆ. ಇತ್ತೀಚಿನ ವರ್ಷಗಳಲ್ಲಿ ಕ್ರೈಂನಲ್ಲಿ ಭಾಗಿಯಾಗದ 513 ಮಂದಿ ಸೇರಿ ಒಟ್ಟು 1256 ರೌಡಿಗಳ ಹೆಸರನ್ನು ರೌಡಿಶೀಟ್ ಪಟ್ಟಿಯಿಂದ ಕ್ಲೋಸ್ ಮಾಡಿದ್ದಾರೆ
ಪ್ರತಿಯೊಬ್ಬ ವ್ಯಕ್ತಿಯ ಅಂತಃಕರಣ ಸರಿ-ತಪ್ಪುಗಳನ್ನು ಪ್ರಾಮಾಣಿಕವಾಗಿ ಹೇಳುತ್ತದೆ. ಅಂತಃಕರಣದ ಎಚ್ಚರ ಪಾಲಿಸಿದರೆ ಜೀವನದಲ್ಲಿ ಎಡವಲು ಸಾಧ್ಯವಿಲ್ಲ ಎಂದು ನಗರದ ಫಾದರ್ ಮ್ಲುಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ವಂ. ರುಡೋಲ್ಫ್ ರವಿ ಡೇಸಾ ಅಭಿಪ್ರಾಯಿಸಿದರು.
ನಗರದ ಟಿ.ವಿ. ರಮಣ ಪೈ ಸಭಾಂಗಣದಲ್ಲಿ ಗುರುವಾರ ನಡೆದ ರೌಡಿಶೀಟರ್‌ಗಳ ‘ಪರಿವರ್ತನಾ ಸಭೆ’ಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.
ಪರಿವರ್ತನಾ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿದ್ದ ಎ.ಜೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎ.ಜೆ. ಶೆಟ್ಟಿ ಮತ್ತು ಯುನಿಟಿ ಆಸ್ಪತ್ರೆ ಛೇರ್‌ಮ್ಯಾನ್ ಡಾ.ಸಿ.ಪಿ. ಹಬೀಬ್ ರೆಹಮಾನ್ ಮಾತನಾಡಿ, ಕಳೆದುಹೋದ ದಿನಗಳ ಬಗ್ಗೆ ಚಿಂತೆ ಬೇಡ, ರೌಡಿ ಶೀಟರ್ ತೆರವಾದ ಎಲ್ಲರೂ ಉತ್ತಮ ನಾಗರಿಕರಾಗಿ ಬದುಕಿ ಕುಟುಂಬದ ಬಾಳು ಬೆಳಗಬೇಕಿದೆ. ಇದರಿಂದ ಸಮಾಜದಲ್ಲಿ ಉತ್ತಮ ಗೌರವ ಸಂಪಾದಿಸಲು ಸಾಧ್ಯ ಎಂದರು.
ನಗರ ಕಾನೂನು ಸುವ್ಯವಸ್ಥಾ ವಿಭಾಗ ಪೊಲೀಸ್ ಉಪ ಆಯುಕ್ತ ಹರಿರಾಂ ಶಂಕರ್, ಸಂಚಾರ ಮತ್ತು ಅಪರಾಧ ವಿಭಾಗದ ಪೊಲೀಸ್ ಉಪ ಆಯುಕ್ತ ಪಿ. ದಿನೇಶ್ ಕುಮಾರ್, ಮಂಗಳೂರು ದಕ್ಷಿಣ ಉಪವಿಭಾಗ ಪೊಲೀಸ್ ಸಹಾಯಕ ಆಯುಕ್ತ ರಂಜಿತ್ ಬಂಡಾರು ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post