ನವದೆಹಲಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಬುಧವಾರ ಭಾರತದ ಮೊದಲ ಹಸಿರು ಹೈಡ್ರೋಜನ್ ಆಧಾರಿತ ಸುಧಾರಿತ ಇಂಧನ ಕೋಶದ ಎಲೆಕ್ಟ್ರಿಕ್ ವೆಹಿಕಲ್ (ಎಫ್‌ಸಿಇವಿ) ‘ಟೊಯೊಟಾ ಮಿರೈ’ ಅನ್ನು ಬಿಡುಗಡೆ ಮಾಡಿದ್ದಾರೆ. ಇದು ಭಾರತದಲ್ಲಿನ ಮೊದಲ ಯೋಜನೆಯಾಗಿದೆ ಎಂದು ಅವರು ಹೇಳಿದ್ಧಾರೆ.
ವಾಹನ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಗಡ್ಕರಿ, ಹೈಡ್ರೋಜನ್‌ನಿಂದ ಚಾಲಿತವಾಗಿರುವ ಎಫ್‌ಸಿಇವಿ ವಾಹನವು ಶೂನ್ಯ-ಅನಿಲ ಹೊರಸೂಸುವ ವಾಹನವಾಗಿದೆ ಎಂದಿದ್ದಾರೆ. ಇದು ಸಂಪೂರ್ಣವಾಗಿ ಪರಿಸರ ಸ್ನೇಹಿಯಾಗಿದ್ದು, ನೀರನ್ನು ಹೊರತುಪಡಿಸಿ ಬೇರೆ ಯಾವುದೇ ಅನಿಲವನ್ನು ಹೊರಸೂಸುವುದಿಲ್ಲ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ಹೇಳಿದ್ದಾರೆ.
ಟೊಯೊಟಾ ಮಿರೈ ವಾಹನವು ಹೈಡ್ರೋಜನ್ ಫ್ಯುಯಲ್ ಸೆಲ್ ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದೆ ಮತ್ತು ಒಂದೇ ಚಾರ್ಜ್‌ನಲ್ಲಿ 650 ಕಿಮೀ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಹೇಳಿಕೊಂಡಿದೆ.
ಜಪಾನ್ ಭಾಷೆಯಲ್ಲಿ ‘ಮಿರೈ’ ಪದದ ಅರ್ಥ ‘ಭವಿಷ್ಯ’ ಎಂಬುದಾಗಿದೆ.
ನವೀಕರಿಸಬಹುದಾದ ಇಂಧನ ಮೂಲಗಳು ಮತ್ತು ಹೇರಳವಾಗಿ ಲಭ್ಯವಿರುವ ಜೀವರಾಶಿಗಳ ಹಸಿರು ತ್ಯಾಜ್ಯದಿಂದ ಜಲಜನಕವನ್ನು ಉತ್ಪಾದಿಸಬಹುದು ಎಂದು ಗಡ್ಕರಿ ಹೇಳಿದರು.
ಹಸಿರು ಹೈಡ್ರೋಜನ್‌ನ ಸಾಮರ್ಥ್ಯವನ್ನು ಬಳಸಿಕೊಳ್ಳುವ ತಂತ್ರಜ್ಞಾನದ ಪರಿಚಯ ಮತ್ತು ಅಳವಡಿಕೆಯು ಭಾರತಕ್ಕೆ ಶುದ್ಧ ಮತ್ತು ಕೈಗೆಟುಕುವ ಇಂಧನ ಭವಿಷ್ಯವನ್ನು ಭದ್ರಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಹೇಳಿದರು.
ಟೊಯೊಟಾ ಕಿರ್ಲೊಸ್ಕರ್ ಮೋಟಾರ್ (ಟಿಕೆಎಂ) ಕಂಪನಿಯು ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಆಟೋಮೋಟಿವ್ ಟೆಕ್ನಾಲಜಿ (ಐಸಿಎಟಿ) ಜೊತೆಗೆ, ಭಾರತೀಯ ರಸ್ತೆಗಳು ಮತ್ತು ಹವಾಮಾನ ಪರಿಸ್ಥಿತಿಗಳಲ್ಲಿ ಹೈಡ್ರೋಜನ್‌ನಲ್ಲಿ ಚಲಿಸುವ ವಿಶ್ವದ ಅತ್ಯಾಧುನಿಕ ಎಫ್‌ಸಿಇವಿ ಟೊಯೊಟಾ ಮಿರೈ ವಾಹನದ ಅಧ್ಯಯನ ಮತ್ತು ಮೌಲ್ಯಮಾಪನಕ್ಕಾಗಿ ಪ್ರಾಯೋಗಿಕ ಯೋಜನೆಯನ್ನು ನಡೆಸುತ್ತಿದೆ.
ಕಾರ್ಯಕ್ರಮದಲ್ಲಿ ಕೇಂದ್ರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ, ಕೇಂದ್ರ ವಿದ್ಯುತ್ ಸಚಿವ ಆರ್ ಕೆ ಸಿಂಗ್ ಮತ್ತು ಭಾರಿ ಕೈಗಾರಿಕೆ ಸಚಿವ ಮಹೇಂದ್ರ ನಾಥ್ ಪಾಂಡೆ ಉಪಸ್ಥಿತರಿದ್ದರು.