ಬೆಂಗಳೂರು: ಶಾಲಾ–ಕಾಲೇಜುಗಳಲ್ಲಿ ಹಿಜಾಬ್‌ಗೆ ನಿರ್ಬಂಧ ವಿಧಿಸಿ ಹೈಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ, ತೀರ್ಪು ಸ್ವೀಕಾರಾರ್ಹವಲ್ಲ ಎಂದು ಪ್ರತಿಪಾದಿಸಿದ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ರಾಜ್ಯದ ವಿವಿಧ ಕಡೆ ಬುಧವಾರ ಪ್ರತಿಭಟನೆ ನಡೆಸಿದರು.
ಬಂದ್‌ಗೆ ಕರೆ: ‘ಹಿಜಾಬ್ ವಿಚಾರವಾಗಿ ಹೈಕೋರ್ಟ್ ನೀಡಿರುವ ತೀರ್ಪನ್ನು ಒಪ್ಪಲಾಗದು’ ಎಂದು ಪ್ರತಿಪಾದಿಸಿರುವ ಮುಸ್ಲಿಂ ಸಮುದಾಯದ ಕೆಲವು ಸಂಘಟನೆಗಳು ಗುರುವಾರ (ಮಾರ್ಚ್ 17) ರಾಜ್ಯ ಬಂದ್‌ಗೆ ಕರೆ ನೀಡಿವೆ.
ಬೆಂಗಳೂರಿನಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ‘ಅಮೀರ್ ಇ ಶರಿಯತ್ ಆಫ್ ಕರ್ನಾಟಕ’ದ (ಮೌಲ್ವಿಗಳ ಸಂಘಟನೆ) ಮೌಲಾನ ಸಘೀರ್ ಅಹ್ಮದ್ ಖಾನ್ ರಶದಿ ಅವರು, ‘ಹೈಕೋರ್ಟ್ ತೀರ್ಪು ನಿರಾಶಾದಾಯಕವಾಗಿದೆ. ಮುಸ್ಲಿಂ ಸಮುದಾಯದ ವಿದ್ವಾಂಸರು, ಮಹಿಳಾ ಸಂಘಟನೆಗಳು ಮತ್ತು ಮಸೀದಿಗಳ ಮುಖ್ಯಸ್ಥರೆಲ್ಲ ಗುರುವಾರ ಶಾಂತಿಯುತ ಬಂದ್‌ಗೆ ಕರೆ ನೀಡಿದ್ದೇವೆ’ ಎಂದರು.
‘ಹಿಜಾಬ್ ಕುರಿತಂತೆ ಹೈಕೋರ್ಟ್ ನೀಡಿರುವುದು ಅನ್ಯಾಯದ ತೀರ್ಪು. ಇದಕ್ಕೆ ಇಡೀ ಮುಸ್ಲಿಂ ಸಮುದಾಯದ ವಿರೋಧವಿದೆ. ಬಂದ್‌ಗೆ ಬೆಂಬಲ ನೀಡುತ್ತೇವೆ’ ಎಂದು ‘ಪಾಪ್ಯುಲರ್ ಫ್ರಂಟ್ ಆಫ್’ ಇಂಡಿಯಾದ ಕರ್ನಾಟಕ ಘಟಕದ ಅಧ್ಯಕ್ಷ ಯಾಸಿರ್ ಹಸನ್ ಅವರು ತಿಳಿಸಿದರು.
‘ಜಮಾತ್ ಇ ಇಸ್ಲಾಮಿ ಹಿಂದ್– ಕರ್ನಾಟಕ’ದ ಉಪಾಧ್ಯಕ್ಷ ಮೊಹಮ್ಮದ್ ಯೂಸುಫ್ ಖನ್ನಿ, ‘ನಮ್ಮದು ಬಹು ಸಂಸ್ಕೃತಿ ಹಾಗೂ ಬಹುಧರ್ಮಗಳ ದೇಶ. ಹಿಜಾಬ್ ವಿಚಾರದಲ್ಲಿ ಮುಸ್ಲಿಂ ಧರ್ಮಕ್ಕೆ ತಾರತಮ್ಯ ಮಾಡಲಾಗುತ್ತಿದೆ.ಇದನ್ನು ವಿರೋಧಿಸಿ, ಸಮುದಾಯದವರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ಶಾಂತಿಯುತವಾಗಿ ಬಂದ್ ನಡೆಸಲಿದ್ದೇವೆ’ ಎಂದರು.
‘ಫೆಡರೇಷನ್ ಆಫ್ ಮುಸ್ಲಿಂ ಆರ್ಗನೈಜೇಷನ್ಸ್’ ಸಂಸ್ಥೆಯು ಮೈಸೂರು ಬಂದ್ ನಡೆಸಲು ಉದ್ದೇಶಿಸಿದೆ. ಭಟ್ಕಳದ ತಂಝೀಂ ಸಂಘಟನೆಯೂ ಬಂದ್‌ಗೆ ಬೆಂಬಲ ನೀಡುವುದಾಗಿ ಘೋಷಿಸಿದೆ.