ಮಂಗಳೂರು: ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಹೈಕೋರ್ಟ್ ನೀಡಿರುವ ತೀರ್ಪನ್ನು ವಿರೋಧಿಸಿ ಮುಸ್ಲಿಂ ಒಕ್ಕೂಟಗಳು ಗುರುವಾರ ಕರೆ ನೀಡಿರುವ ಬಂದ್ ಬೆಂಬಲಿಸಿ ನಗರದಲ್ಲಿ ಮುಸ್ಲಿಂ ಮಾಲೀಕತ್ವದ ಹಲವು ಅಂಗಡಿ, ಮಳಿಗೆಗಳು ಬಾಗಿಲು ಮುಚ್ಚಿವೆ.
ಸೆಂಟ್ರಲ್ ಮಾರ್ಕೆಟ್, ಸ್ಟೇಟ್ ಬ್ಯಾಂಕ್ ರೋಡ್, ದಕ್ಕೆಯಲ್ಲಿರುವ ಮುಸ್ಲಿಮರಿಗೆ ಸೇರಿದ ಬಹುತೇಕ ಅಂಗಡಿಗಳು, ಮಳಿಗೆಗಳು, ಹೊಟೇಲ್ ಗಳು ತೆರೆಯಲಿಲ್ಲ. ಬಸ್, ರಿಕ್ಷಾಗಳು ರಸ್ತೆಗೆ ಇಳಿಯಲಿಲ್ಲ. ಕೆಲವು ಶಿಕ್ಷಣ ಸಂಸ್ಥೆಗಳು, ಮದ್ರಸಗಳಿಗೆ ರಜೆ ಸಾರಲಾಗಿದೆ. ಅಲ್ಲದೆ ಬಂದರ್, ಸ್ಟೇಟ್ ಬ್ಯಾಂಕ್ ರಸ್ತೆ ಬದಿ, ಮಾರ್ಕೆಟ್ ರಸ್ತೆ, ಕಲ್ಲಾಪಿನ ಮಾರ್ಕೆಟ್, ಬಂದರ್ ಧಕ್ಕೆಯಲ್ಲಿ ವ್ಯವಹಾರ ಚಟುವಟಿಕೆಗಳು ಸ್ಥಗಿತಗೊಂಡಿವೆ. ಮುಸ್ಲಿಂ ಮಾಲಕತ್ವದ ಕಚೇರಿಗಳು, ವರ್ಕ್ ಶಾಪ್‌ಗಳು, ಸಾರಿಗೆ ಸಂಸ್ಥೆಗಳು, ಗುತ್ತಿಗೆ ಸಂಸ್ಥೆಗಳು ಕೂಡ ಮುಚ್ಚಲ್ಪಟ್ಟಿವೆ. ಹೊಟೇಲ್, ಚಿನ್ನಾಭರಣಗಳ ಮಳಿಗೆಗಳು, ಖಾಸಗಿ ಕಚೇರಿಗಳು ಬಂದ್ ಆಗಿವೆ.
ಅಮೀರ್-ಇ-ಶರಿಯತ್ ಕರೆ ನೀಡಿರುವ ಬಂದ್ ಗೆ ಕರಾವಳಿಯ ಬಹುತೇಕ ಮುಸ್ಲಿಂ ಸಂಘಟನೆಗಳು ಬೆಂಬಲ ನೀಡಿವೆ.
ದಕ್ಕೆಯಲ್ಲಿ ಮೀನುಗಾರಿಕಾ ಚಟುವಟಿಕೆ ಬಹುತೇಕ ಸ್ತಬ್ಧಗೊಂಡಿದೆ. ಬಂದ್ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದು, ಎಲ್ಲೆಡೆ ಪೊಲೀಸರು ನಿಂತು ನಿಗಾವಹಿಸುತ್ತಿದ್ದಾರೆ.
ಜಿಲ್ಲೆಯ ಪುತ್ತೂರು, ಬಂಟ್ವಾಳ ತಾಲ್ಲೂಕು ಹಾಗೂ ಇನ್ನಿತರ ಗ್ರಾಮೀಣ ಪ್ರದೇಶಗಳಲ್ಲೂ ಮುಸ್ಲಿಂ ಸಮುದಾಯದವರ ಮಾಲೀಕತ್ವದ ಅಂಗಡಿ, ಹೋಟೆಲ್ ಗಳು ಬಂದ್ ಗೆ ಸ್ಪಂದಿಸಿ, ಬಾಗಿಲು ಮುಚ್ಚಿವೆ.