ಬೆಂಗಳೂರು, ಜೂನ್ 16: ಬೆಂಗಳೂರಿನ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಲ್ಲದೆ, ಬೆತ್ತಲೆ ವಿಡಿಯೋ ಮಾಡಿ ಬ್ಲ್ಯಾಕ್ಮೇಲ್ ಮಾಡಿದ ಆರೋಪದಲ್ಲಿ ಕೇರಳದ ಪೆರಿಂಗೋಟ್ಟುಕ್ಕಾರ ದೇವಸ್ಥಾನದ ಅರ್ಚಕ ಅರುಣ್ ಎಂಬಾತನನ್ನು ಬೆಂಗಳೂರಿನ ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ, ಮುಖ್ಯ ಅರ್ಚಕ ಉನ್ನಿ ದಾಮೋದರನ್ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ. ಪೂಜೆ ಮಾಡಿಸಲೆಂದು ಕೇರಳದ ಪೆರಿಂಗೋಟ್ಟುಕ್ಕಾರ ದೇವಸ್ಥಾನಕ್ಕೆ ತೆರಳಿದ್ದ ಮಹಿಳೆಗೆ ಮಾಟ ಮಾಂತ್ರದ ಬೆದರಿಕೆಯೊಡ್ಡಿ ಮುಖ್ಯ ಅರ್ಚಕ ಹಾಗೂ ಅರ್ಚಕ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಕೌಟುಂಬಿಕ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ, ತಮಗೆ ಮಾಟಮಂತ್ರವಿದೆ ಎಂದು ಭಾವಿಸಿ, ಪೆರಿಗೊಟ್ಟುಕ್ಕಾರ ದೇವಾಲಯಕ್ಕೆ ಪೂಜೆಗಾಗಿ ಭೇಟಿ ನೀಡಿದ್ದರು. ಈ ವೇಳೆ ದೇವಾಲಯದ ಅರ್ಚಕ ಅರುಣ್ ಜೊತೆ ಪರಿಚಯವಾಯಿತು. ಅರುಣ್, 24 ಸಾವಿರ ರೂಪಾಯಿ ನೀಡಿದರೆ ವಿಶೇಷ ಪೂಜೆ ಮಾಡುವುದಾಗಿ ಭರವಸೆ ನೀಡಿದ್ದ. ಬಳಿಕ ಮಹಿಳೆಯ ಮೊಬೈಲ್ ಸಂಖ್ಯೆ ಪಡೆದು, ನಿಗದಿತ ದಿನದಂದು ದೇವಾಲಯಕ್ಕೆ ಬರಲು ಸೂಚಿಸಿದ್ದ.
ಕೆಲವು ದಿನಗಳ ಬಳಿಕ, ಅರುಣ್ ತಡರಾತ್ರಿಯಲ್ಲಿ ಮಹಿಳೆಗೆ ನಿರಂತರ ವಾಟ್ಸ್‌ಆ್ಯಪ್ ಕರೆಗಳನ್ನು ಮಾಡಲಾರಂಭಿಸಿದ. ಈ ಕರೆಗಳಲ್ಲಿ ಆತ ಬೆತ್ತಲೆಯಾಗಿ ಕಾಣಿಸಿಕೊಂಡಿದ್ದ ಎಂದು ಆರೋಪಿಸಲಾಗಿದೆ. “ನಿಮಗೆ ಮಾಡಿರುವ ಮಾಟಮಂತ್ರ ತೆಗೆಯಬೇಕಾದರೆ ಬೆತ್ತಲಾಗಬೇಕು” ಎಂದು ಒತ್ತಾಯಿಸಿದ್ದಾನೆ.ಮಹಿಳೆ ಇದನ್ನು ನಿರಾಕರಿಸಿದಾಗ, “ಬೆತ್ತಲಾಗದಿದ್ದರೆ, ನಿಮ್ಮ ಇಬ್ಬರು ಮಕ್ಕಳು ಸಾಯುವಂತೆ ರಿಟರ್ನ್ ಪೂಜೆ ಮಾಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ.
ಅರುಣ್‌ನ ಬೆದರಿಕೆಗೆ ಭಯಗೊಂಡ ಮಹಿಳೆ, ಒತ್ತಾಯಕ್ಕೆ ಮಣಿದು ಬೆತ್ತಲೆಯಾದಾಗ, ಆತ ಆ ಕ್ಷಣವನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ. ಈ ವಿಡಿಯೋ ಬಳಸಿ, ಮಹಿಳೆಯನ್ನು ಕೇರಳಕ್ಕೆ ಕರೆಸಿದ್ದಾನೆ. “ನೀವು ಬಂದರೆ ರೂಂ ಬುಕ್ ಮಾಡುತ್ತೇನೆ” ಎಂದು ಹಿಂಸೆ ನೀಡಿದ್ದಾನೆ. ಈ ಒತ್ತಡಕ್ಕೆ ಸಿಲುಕಿ, ಮಹಿಳೆ ಕೇರಳಕ್ಕೆ ತೆರಳಿದ್ದಾರೆ. ಕೇರಳದಲ್ಲಿ, ಅರುಣ್ ಮತ್ತು ಮುಖ್ಯ ಅರ್ಚಕ ಉನ್ನಿ ದಾಮೋದರನ್ ಇಬ್ಬರೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಆಕೆಯನ್ನು ಕಾರಿನಲ್ಲಿ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಬೆಳ್ಳಂದೂರು ಠಾಣೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಸಂತ್ರಸ್ತೆ ಮಹಿಳೆ ಉಲ್ಲೇಖಿಸಿದ್ದಾರೆ.
ಇಬ್ಬರ ಹಿಂಸೆಗೆ ಬೇಸತ್ತ ಮಹಿಳೆ, ಬೆಂಗಳೂರಿನ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತಡರಾತ್ರಿ ಅರುಣ್ ಕಳುಹಿಸಿದ ಸಂದೇಶಗಳ ಸ್ಕ್ರೀನ್‌ಶಾಟ್‌ಗಳು ಮತ್ತು ರೂಂಗೆ ಬರಲು ಒತ್ತಾಯಿಸಿದ ಕರೆಯ ರೆಕಾರ್ಡಿಂಗ್‌ಗಳನ್ನು ಪೊಲೀಸರಿಗೆ ಒದಗಿಸಿದ್ದಾರೆ. ಈ ಆಧಾರದ ಮೇಲೆ ಪೊಲೀಸರು ಅರುಣ್‌ನನ್ನು ಬಂಧಿಸಿದ್ದಾರೆ. ಆದರೆ, ಮುಖ್ಯ ಆರೋಪಿ ಉನ್ನಿ ದಾಮೋದರನ್ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಶೋಧ ಕಾರ್ಯಾಚರಣೆ ಆರಂಭವಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post