ಉಡುಪಿ, ಆ.15: ಮುದರಂಗಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಗುತ್ತಿಗೆದಾರ ಡೇವಿಡ್ ಡಿಸೋಜ ಹತ್ಯೆ ಪ್ರಕರಣಕ್ಕೆ ಸಂಬಂಧ ಸುಪಾರಿ ಕಿಲ್ಲರ್ಸ್ ಗೆ ಹಣಕಾಸು ಪೂರೈಸಿದ್ದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ.
ಬಡಾ ಎರ್ಮಾಳ್ ಗ್ರಾಮದ ಅದಮಾರು ಮಠದ ಬಳಿಯ ನಿವಾಸಿ ಸದಾನಂದ ದೇವಾಡಿಗ (41) ಹಾಗೂ ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಬಳಿಯ ನಿವಾಸಿ ಕಿಶೋರ್ ರಾಮ ಪೂಜಾರಿ (47) ಬಂಧಿತ ಆರೋಪಿಗಳು. ಆರೋಪಿಗಳ ಬ್ಯಾಂಕ್ ಖಾತೆ ವಿವರ, ಸಿಸಿಟಿವಿ ದೃಶ್ಯಾವಳಿ ಹಾಗೂ ಕರೆ ದಾಖಲೆಗಳನ್ನು ವಿಶ್ಲೇಷಿಸಿದಾಗ ಕೊಲೆಗೆ ಒಳಸಂಚು ನಡೆಸಿ ಹಣಕಾಸಿನ ನೆರವು ನೀಡುವಲ್ಲಿ ಸದಾನಂದ ದೇವಾಡಿಗ ಹಾಗೂ ಕಿಶೋರ್ ಪೂಜಾರಿ ಪ್ರಮುಖ ಪಾತ್ರ ವಹಿಸಿರುವುದು ದೃಢಪಟ್ಟಿದೆ.
ಆಗಸ್ಟ್ 7ರಂದು ನಡೆದ ಈ ಶೂಟೌಟ್ ಕೃತ್ಯಕ್ಕೆ ಸಂಬಂಧಿಸಿ ಪೊಲೀಸರು ಮೊದಲಿಗೆ ನೇರವಾಗಿ ಭಾಗಿಯಾಗಿದ್ದ ಉತ್ತರ ಭಾರತ ಮೂಲದ ರಾಜು, ಅನ್ಮೋಲ್ ರಸ್ತೋಗಿ ಹಾಗೂ ಜಿಯಾಹುಲ್ ಶೇಖ್ ಅವರನ್ನು ಬಂಧಿಸಿದ್ದರು. ನಂತರ ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಿದಾಗ, ಆರೋಪಿಗಳಿಗೆ ಹಣ ಜಮಾ ಮಾಡಿ ಸಹಕರಿಸಿದ್ದ ಮೊಹಮ್ಮದ್ ಇರ್ಷಾದ್ ಮತ್ತು ಚಿರಾಗ್ ಪೂಜಾರಿಯನ್ನು ಬಂಧಿಸಲಾಗಿತ್ತು. ಇದೀಗ ಬಂಧಿತ ಸದಾನಂದನಿಂದ ಕೃತ್ಯಕ್ಕೆ ಬಳಸಿದ 2 ಮೊಬೈಲ್ ಫೋನ್‌ಗಳು, 1 ಬೈಕ್ ಹಾಗೂ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಕಿಶೋರ್ ಪೂಜಾರಿಯಿಂದ 3 ಮೊಬೈಲ್ ಫೋನ್ ಮತ್ತು 1 ಕಾರನ್ನು ವಶಕ್ಕೆ ಪಡೆಯಲಾಗಿದೆ.
ಈ ಇಬ್ಬರ ಬಂಧನದೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು ಏಳು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಂತಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ, ತಮ್ಮನ್ನು ಆಗಸ್ಟ್ 10ರಂದೇ ಪೊಲೀಸರು ವಶಕ್ಕೆ ಪಡೆದಿದ್ದರು ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಕಿಶೋರ್ ಪೂಜಾರಿ ಪರ ವಾದ ಮಂಡಿಸಿದ ವಕೀಲರು, ಕಿಶೋರ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಹಾಗೂ ಅವರ ಮನೆಯಲ್ಲಿದ್ದ ಸಿಸಿಟಿವಿ ವ್ಯವಸ್ಥೆಯನ್ನು ಪೊಲೀಸರು ತೆಗೆದುಕೊಂಡು ಹೋಗಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ಇದನ್ನು ಆಲಿಸಿದ ನ್ಯಾಯಾಧೀಶರು, ತನಿಖೆಯ ಅಗತ್ಯವಿದ್ದರೆ ಪೊಲೀಸರು ಆರೋಪಿಗಳ ಪೊಲೀಸ್ ಕಸ್ಟಡಿಗೆ ನ್ಯಾಯಾಲಯದಿಂದ ಅನುಮತಿ ಪಡೆಯಬಹುದಿತ್ತು ಎಂದು ಅಭಿಪ್ರಾಯಪಟ್ಟರು. ಈ ರೀತಿಯ ಕ್ರಮ ಏಕೆ ಕೈಗೊಳ್ಳಲಾಯಿತು ಎಂಬುದರ ಬಗ್ಗೆಯೂ ನ್ಯಾಯಾಧೀಶರು ಪ್ರಶ್ನಿಸಿದರು. ಈ ಕುರಿತು ತನಿಖಾಧಿಕಾರಿ ವಿವರಣೆ ನೀಡುವಂತೆ ನ್ಯಾಯಾಧೀಶರು ಮೌಖಿಕವಾಗಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
Discover more from Coastal Times Kannada
Subscribe to get the latest posts sent to your email.







Discussion about this post