ಬೆಂಗಳೂರು: ಕರ್ಣಾಟಕ ಬ್ಯಾಂಕ್ಗೆ ನೂತನ ಅಧ್ಯಕ್ಷರಾಗಿ ಪಿ. ಪ್ರದೀಪ್ಕುಮಾರ್ ಸೋಮವಾರ ಅಧಿಕಾರ ಸ್ವೀಕರಿಸಿದ್ದು, 3 ವರ್ಷದವರೆಗೆ ಮುಂದುವರಿಯಲಿದ್ದಾರೆ. ಬಸವನಗುಡಿಯ ಕರ್ಣಾಟಕ ಬ್ಯಾಂಕ್ನ ಪ್ರಾದೇಶಿಕ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಗ್ರಾಹಕರಿಗೆ ಈಗಾಗಲೆ ಉತ್ತಮ ಸೇವೆ ಒದಗಿಸುತ್ತಿರುವ ಕರ್ಣಾಟಕ ಬ್ಯಾಂಕನ್ನು ಮತ್ತಷ್ಟು ಡಿಜಿಟಲೀಕರಣ ಮಾಡುವ ಮೂಲಕ ಯುವಪೀಳಿಗೆಗೆ ಒಳ್ಳೆಯ ಸೇವೆ ನೀಡುವುದು ನನ್ನ ಮೊದಲ ಆದ್ಯತೆಯಾಗಿದೆ. ಇದಕ್ಕೆ ಬ್ಯಾಂಕಿನ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಸಹಕಾರ ಅವಶ್ಯಕವಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ 97 ವರ್ಷ ಪೂರೈಸಿರುವ ಈ ಬ್ಯಾಂಕ್ಗೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುವುದಕ್ಕೆ ಖುಷಿಯಾಗುತ್ತಿದೆ ಎಂದರು.
ಪ್ರದೀಪ್ ಕುಮಾರ್ ಬಗ್ಗೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ವ್ಯವಸ್ಥಾಪಕ ನಿರ್ದೇಶಕರಾಗಿ (ಕಾಪೋರೇಟ್ ಬ್ಯಾಂಕಿಂಗ್) ನಿವೃತ್ತಿ ಹೊಂದಿರುವ ಪ್ರದೀಪ್ ಕುಮಾರ್ ಇದಕ್ಕೂ ಮುನ್ನ ಕಾಪೋರೇಟ್ ಮತ್ತು ಅಂತಾರಾಷ್ಟ್ರೀಯ ಬ್ಯಾಂಕಿಂಗ್, ಖಜಾನೆ ನಿರ್ವಹಣೆ, ಮಾಹಿತಿ ತಂತ್ರಜ್ಞಾನ, ರಿಟೇಲ್ ಬ್ಯಾಂಕಿಂಗ್, ವಹಿವಾಟು ಬ್ಯಾಂಕಿಂಗ್, ಕಾರ್ಯತಂತ್ರದ ಯೋಜನೆ, ವ್ಯಾಪಾರ ಅಭಿವೃದ್ಧಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬರೋಬ್ಬರಿ 39 ವರ್ಷಗಳ ಅನುಭವ ಪಡೆದಿರುವ ಪ್ರದೀಪ್ ಕುಮಾರ್ ದಕ್ಷಿಣ ಕನ್ನಡ ಮೂಲದವರು.
ಕರ್ಣಾಟಕ ಬ್ಯಾಂಕ್ ಎಂಡಿ ಮತ್ತು ಸಿಇಒ ಎಂ.ಎಸ್.ಮಹಾಬಲೇಶ್ವರ ಮಾತನಾಡಿ, ಕರ್ಣಾಟಕ ಬ್ಯಾಂಕ್ನ ಉಳಿತಾಯ ಹಾಗೂ ಚಾಲ್ತಿ ಖಾತೆಗಳ (ಕಾಸಾ) ಅಭಿಯಾನಕ್ಕೆ ಸೋಮವಾರ ಚಾಲನೆ ನೀಡಲಾಗಿದೆ. 2020ರ ಫೆ.28ರಂದು ಈ ಅಭಿಯಾನ ಅಂತ್ಯಗೊಳ್ಳಲಿದೆ. ದೇಶಾದ್ಯಂತ 4.15 ಲಕ್ಷ ಉಳಿತಾಯ ಹಾಗೂ ಚಾಲ್ತಿ ಖಾತೆಗಳನ್ನು ತೆರೆಯುವ ಗುರಿ ಹೊಂದಲಾಗಿದೆ. 650 ಕೋಟಿ ರೂ. ಸಂಗ್ರಹ ಮಾಡುವ ಗುರಿ ಇಟ್ಟುಕೊಂಡಿದ್ದೇವೆ ಎಂದರು. ಈ ಬಾರಿ ದೇಶಾದ್ಯಂತ 858 ಶಾಖೆಗಳಲ್ಲಿ 8 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಸಹಾಯದಲ್ಲಿ ಹೆಚ್ಚಿನ ಖಾತೆಗಳನ್ನು ತೆರೆಯುವ ಗುರಿ ಇದೆ. ಬ್ಯಾಂಕ್ ಸೌಲಭ್ಯಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುತ್ತಿದೆ. ಉಳಿತಾಯ ಖಾತೆ ಹೊಂದಿರುವ ಗ್ರಾಹಕರಿಗೆ 10 ಲಕ್ಷ ರೂ. ವರೆಗೆ ವೈಯಕ್ತಿಕ ಅಪಘಾತ ವಿಮಾ ಸೇರಿ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.