ಮಂಗಳೂರು, ಡಿ.15 : 85 ವರ್ಷದ ಅಜ್ಜಿ ಮಾತ್ರ ಇದ್ದ ಮನೆಯೊಂದಕ್ಕೆ ನೀರು ಕೇಳುವ ನೆಪದಲ್ಲಿ ನುಗ್ಗಿದ ಅಜ್ಜಿಯ ಕುತ್ತಿಗೆಯನ್ನು ಶಾಲಿನಲ್ಲಿ ಬಿಗಿದು ಚಿನ್ನದ ಒಡವೆಗಳನ್ನು ದೋಚಿ ದರೋಡೆಗೈದು ಪರಾರಿಯಾಗಿದ್ದ ಕಳ್ಳರ ತಂಡವನ್ನು ಸುರತ್ಕಲ್ ಪೊಲೀಸರು ಕೃತ್ಯ ನಡೆದ ಕೆಲವೇ ದಿನಗಳಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ.
ಸುರತ್ಕಲ್ ಮುಕ್ಕದ ಸಸಿಹಿತ್ಲು ರಸ್ತೆಯ ಮಿತ್ರಪಟ್ಣದ ನಿವಾಸಿ ಜಲಜ(85) ಎಂಬವರ ಮನೆಗೆ ಡಿ.3ರಂದು ತಡರಾತ್ರಿ 2.30 ಗಂಟೆ ಸುಮಾರಿಗೆ ಯಾರೋ ಅಪರಿಚಿತರು ಮನೆಯ ಬಾಗಿಲು ಬಡಿದು ಕುಡಿಯಲು ನೀರು ಬೇಕು ಬಾಗಿಲು ತೆರೆಯಿರಿ ಎಂದು ಹೇಳಿದ್ದಾರೆ. ಪಿರ್ಯಾದಿದಾರರು ಬಾಗಿಲು ತೆರೆಯದೇ ಇದ್ದಾಗ ಆರೋಪಿತರು ಮನೆಯ ಹಂಚನ್ನು ತೆಗೆದು ಒಳಗೆ ಪ್ರವೇಶಿಸಿ ಪಿರ್ಯಾದಿದಾರರನ್ನು “ಬಂಗಾರ್ ಒಲ್ಪ ಉಂಡು” (ಬಂಗಾರ ಎಲ್ಲಿದೆ) ಎಂದು ತುಳುವಿನಲ್ಲಿ ಜೋರಾಗಿ ಬೆದರಿಸಿ, ಬೈರಾಸನ್ನು ಪಿರ್ಯಾದಿದಾರರ ಕುತ್ತಿಗೆಗೆ ಬಿಗಿದು “ಬೊಬ್ಬೆ ಪಾಡುಂಡ ಕೆರ್ಪೆ ಬಂಗಾರ್ ಇಜ್ಜಾ ಉಂಡಾ ತೂಪ ಎಂಕುಲ್ ಏರೆನ್ಲಾ ಲೆತ್ತ್ಂಡ ನಾಲಿಡ್ ಪತ್ತ್ದ್ ಕೆರ್ಪೆ” (ಬೊಬ್ಬೆ ಹೊಡೆದರೆ ಸಾಯಿಸುತ್ತೇನೆ ಬಂಗಾರ ಇದೆಯೋ ಇಲ್ಲವೋ ನೋಡುತ್ತೇನೆ ಯಾರನ್ನಾದರೂ ಕರೆದರೆ ಕುತ್ತಿಗೆ ಹಿಸುಕಿ ಸಾಯಿಸುತ್ತೇನೆ) ಎಂದು ತುಳುವಿನಲ್ಲಿ ಬೆದರಿಸಿದ್ದಾರೆ.
ಬಳಿಕ ಗೋದ್ರೇಜ್ ನಲ್ಲಿದ್ದ ಸುಮಾರು 16 ಗ್ರಾಂ ತೂಕದ ಚಿನ್ನದ ಸರ, 20 ಗ್ರಾಂ ತೂಕದ 2 ಚಿನ್ನದ ಬಳೆ ಹಾಗೂ ಪರ್ಸ್ ನಲ್ಲಿ ಸುಮಾರು 14,000/- ರೂಪಾಯಿ ನಗದು ಹಣವನ್ನು ದೋಚಿದ ಬಗ್ಗೆ ಪ್ರಕರಣ ದಾಖಲಿಸಿ ಆರೋಪಿತರ ಪತ್ತೆಯ ಬಗ್ಗೆ ಪಿಎಸ್.ಐ ರಘು ನಾಯಕ, ರಾಘವೇಂದ್ರ ನಾಯ್ಕ್ ಹಾಗೂ ಸಿಬ್ಬಂದಿಯವರ ತಂಡವನ್ನು ರಚಿಸಲಾಗಿತ್ತು. ಕೃತ್ಯ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದಾಗ ಸುರತ್ಕಲ್ ಗುಡ್ಡೆಕೊಪ್ಲ ನಿವಾಸಿ ಶೈನ್ ಎಚ್. ಪುತ್ರನ್ (21) ಎಂಬಾತನ ಬಗ್ಗೆ ಸಂಶಯ ಬಂದಿದ್ದು ವಶಕ್ಕೆ ಪಡೆದು ವಿಚಾರಿಸಿದಾಗ ಸದ್ರಿ ಕೃತ್ಯವನ್ನು ಜೈಸನ್ @ ಲೆನ್ಸನ್ ಕಾರ್ಕಳ ಎಂಬಾತನೊಂದಿಗೆ ಮಾಡಿರುವುದಾಗಿ ಒಪ್ಪಿದ್ದಾನೆ.
ಬಂಗಾರವನ್ನು ಬೆಂಗಳೂರಿಗೆ ಹೋಗಿ ಗಿರೀಶ್ ಎಸ್ ಮತ್ತು ವಿನೋದ್ ಕುಮಾರ್ ಎಂಬವರಿಗೆ ಮಾರಾಟ ಮಾಡಿದ ಬಗ್ಗೆ ತಿಳಿಸಿದ್ದಾನೆ. ಪೊಲೀಸರು ಬೆಂಗಳೂರಿಗೆ ತೆರಳಿ ಎಲೆಚನಹಳ್ಳಿ ಕಾಶಿನಗರ ನಿವಾಸಿ ವಿನೋದ್ @ ಕೋತಿ @ ವಿನೋದ್ ಕುಮಾರ್, (33) ಹಾಗೂ ಕನಕಪುರ ಉಡಿಪಾಳ್ಯ ನಿವಾಸಿ ಗಿರೀಶ್ @ ಸೈಕಲ್ ಗಿರಿ (28) ಎಂಬವರನ್ನು ಡಿ.14ರಂದು ವಶಕ್ಕೆ ಪಡೆದು ಆರೋಪಿತರಿಂದ ಕಳವಾದ 4,43,000 ರೂ. ಬೆಲೆಬಾಳುವ ಬಂಗಾರವನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಮೋಟಾರ್ ಸೈಕಲ್, 3 ಮೊಬೈಲ್ ಹಾಗೂ 3,000 ನಗದನ್ನು ಮಹಜರು ವೇಳೆ ವಶಕ್ಕೆ ಪಡೆಯಲಾಗಿದೆ. ಇನ್ನೋರ್ವ ಆರೋಪಿ ಜೈಸನ್ ಯಾನೆ ಲೆನ್ಸನ್ ಕಾರ್ಕಳ ತಲೆಮರೆಸಿಕೊಂಡಿದ್ದಾನೆ.
ಶೈನ್ ಎಚ್. ಪುತ್ರನ್ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಗಾಂಜಾ ಸೇವನೆಯ ಒಂದು ಪ್ರಕರಣ ದಾಖಲಾಗಿದೆ. ವಿನೋದ್ @ ಕೋತಿ @ ವಿನೋದ್ ಕುಮಾರ್ ಎಂಬಾತನ ಮೇಲೆ ಬೆಂಗಳೂರಿನ ಕೆ.ಎಸ್.ಲೇಔಟ್ ಠಾಣೆಯಲ್ಲಿ ರೌಡಿ ಶೀಟ್ ತೆರೆಯಲಾಗಿದೆ. ಅಲ್ಲದೆ, ಬೆಂಗಳೂರು ನಗರದ ವಿವಿಧ ಠಾಣೆಗಳಲ್ಲಿ 2 ಕೊಲೆ, 2 ಕೊಲೆಯತ್ನ, 4 ದರೋಡೆ, 1 ಬೆದರಿಕೆ, 1 ಗಾಂಜಾ ಮಾರಾಟ, 1 ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣ ಒಟ್ಟು 11 ಪ್ರಕರಣಗಳು ದಾಖಲಾಗಿರುತ್ತವೆ. ಗಿರೀಶ್ @ ಸೈಕಲ್ ಗಿರಿ ಎಂಬಾತನ ಮೇಲೆ ಬೆಂಗಳೂರಿನ ಕಗ್ಗಲಿಪುರ ಠಾಣೆಯಲ್ಲಿ ರೌಡಿ ತೆರೆಯಲಾಗಿದೆ ಹಾಗೂ ಬೆಂಗಳೂರು ನಗರದ ವಿವಿಧ ಠಾಣೆಯಲ್ಲಿ 5 ಕೊಲೆಯತ್ನ, 1 ದರೋಡೆ, 3 ಹಲ್ಲೆ ಪ್ರಕರಣ ಸೇರಿ ಒಟ್ಟು 9 ಪ್ರಕರಣಗಳು ದಾಖಲಾಗಿರುತ್ತವೆ.
ಆರೋಪಿತರನ್ನು ಮಂಗಳೂರಿನಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ಸದ್ರಿ ಆರೋಪಿ ಪತ್ತೆಯ ಬಗ್ಗೆ ಸಹಾಯಕ ಪೊಲೀಸ್ ಆಯುಕ್ತರು (ಉತ್ತರ ಉಪ ವಿಭಾಗ) ಶ್ರೀಕಾಂತ್ ಕೆ. ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಪ್ರಮೋದ್ ಕುಮಾರ್ ಪಿ, ಪಿಎಸ್.ಐ ರಘುನಾಯಕ್, ರಾಘವೇಂದ್ರ ನಾಯ್ಕ್, ಎ.ಎಸ್.ಐ ಗಳಾದ ರಾಧಾಕೃಷ್ಣ, ರಾಜೇಶ್ ಆಳ್ವ ಹಾಗೂ ಠಾಣಾ ಸಿಬ್ಬಂದಿಗಳಾದ ಅಣ್ಣಪ್ಪ, ಉಮೇಶ್, ಅಜಿತ್ ಮ್ಯಾಥ್ಯೂ, ತಿರುಪತಿ, ಕಾರ್ತಿಕ್, ವಿನೋದ್ ನಾಯ್ಕ್, ಸುನೀಲ್ ಕುಸನಾಳ, ಸತೀಶ ಸತ್ತಿಗೇರಿ, ಮಂಜುನಾಥ ಬೊಮ್ಮನಾಳ, ಹನುಮಂತ ಆಲೂರ ಪತ್ತೆಯ ಬಗ್ಗೆ ಭಾಗವಹಿಸಿರುತ್ತಾರೆ.
Discover more from Coastal Times Kannada
Subscribe to get the latest posts sent to your email.








Discussion about this post