ಉಳ್ಳಾಲ: ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಶಿಥಿಲಾವಸ್ಥೆಯಲ್ಲಿದ್ದ ಶಾಲೆ ಕಟ್ಟಡ ಕುಸಿದುಬಿದ್ದಿದೆ. ಕಿನ್ಯಾ ಬೆಳರಿಂಗೆ ಯ ಸರ್ಕಾರಿ ಹಿ.ಪ್ರಾ. ಪ್ರಾಥಮಿಕ ಶಾಲೆಯ ಹಳೇ ಕಟ್ಟಡ ಕುಸಿದುಬಿದ್ದಿದೆ. ಸಮೀಪದಲ್ಲೇ ಹೊಸ ಕಟ್ಟಡ ನಿರ್ಮಿಸಲಾಗಿದ್ದು, ಅದರಲ್ಲಿ ತರಗತಿಗಳು ನಡೆಯುತ್ತಿದ್ದುದರಿಂದ ತರಗತಿ ನಡೆಸಲು ಅಡಚಣೆಯಾಗಿಲ್ಲ. ಕಿನ್ಯ ಗ್ರಾಮದ ಬೆಳರಿಂಗೆ ಹಿ.ಪ್ರಾ. ಶಾಲೆಯಲ್ಲಿ ಸುಮಾರು 127 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಶಾಲಾ ಕಟ್ಟಡವು ಶಿಥಿಲಾವಸ್ಥೆಯಲ್ಲಿರುವ ಬಗ್ಗೆ ಕಳೆದ ವರ್ಷವೇ ಹಲವು ಬಾರಿ ಶಿಕ್ಷಣ ಇಲಾಖಾಧಿಕಾರಿಗಳಿಗೆ ಶಾಲಾಭಿವೃದ್ಧಿ ಸಮಿತಿಯವರು ದೂರು ನೀಡಿದ್ದರು. ಈ ಸಂದರ್ಭ ಸ್ಥಳಕ್ಕೆ ಪರಿಶೀಲನೆಗೆ ಬಂದಿದ್ದ ಜಿಲ್ಲಾ ಪಂಚಾಯತ್ ಇಂಜಿನಿಯರ್ ನಿತಿನ್ ಎಂಬವರು ಕಟ್ಟಡ ಗಟ್ಟಿ ಮುಟ್ಟಾಗಿದೆ ಎಂದು ಸರ್ಟಿಫಿಕೇಟ್ ನೀಡಿ ವಾಪಾಸು ಆಗಿದ್ದಾರೆ ಎಂದು ಸ್ಥಳೀಯರ ಆರೋಪ ವ್ಯಕ್ತವಾಗಿದೆ.
ಹಳೇ ಕಟ್ಟಡ ಕೆಡವಲು ಗ್ರಾಮ ಪಂಚಾಯಿತಿಯಿಂದ ಶಿಕ್ಷಣ ಇಲಾಖೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಅನುಮತಿ ನೀಡದ್ದರಿಂದ ಕಟ್ಟಡ ಕೆಡವಲು ಸಾಧ್ಯವಾಗಿಲ್ಲ ಎಂದು ಗ್ರಾ.ಪಂ. ಸದಸ್ಯ ಸಿರಾಜ್ ಕಿನ್ಯಾ ತಿಳಿಸಿದ್ದಾರೆ.