ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ನೇತ್ರಾವತಿ ಸ್ನಾನಘಟ್ಟದ ಸಮೀಪ ಬಂಗ್ಲೆಗುಡ್ಡ ಅರಣ್ಯ ಪ್ರದೇಶದಲ್ಲಿ ಎಸ್.ಐ.ಟಿ. ಶೋಧ ಕಾರ್ಯಾಚರಣೆ ವೇಳೆ ಒಂಭತ್ತು ಸ್ಥಳಗಳಲ್ಲಿ ಮಾನವನ ಮೂಳೆಗಳ ಅವಶೇಷಗಳು ಪತ್ತೆಯಾಗಿವೆ. ಬಂಗ್ಲೆಗುಡ್ಡೆಯಲ್ಲಿ ಇಂದು ನಡೆಸಿದ ಕಾರ್ಯಾಚರಣೆಯಲ್ಲಿ ಒಂಬತ್ತು ಸ್ಥಳಗಳಲ್ಲಿ ಮಾನವನ ಅವಶೇಷಗಳು ಪತ್ತೆಯಾಗಿದ್ದು, ಅದನ್ನು ಅಧಿಕಾರಿಗಳು ಮಹಜರು ನಡೆಸುತ್ತಿದ್ದಾರೆ ಎನ್ನಲಾಗಿದೆ.
ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ಮೃತದೇಹಗಳನ್ನು ಹೂತುಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಪಕ್ಕದ ಬಂಗ್ಲೆಗುಡ್ಡ ಕಾಡಿನಲ್ಲಿ ಬುಧವಾರ ಮತ್ತೆ ಶೋಧ ಕಾರ್ಯ ನಡೆಸುತ್ತಿದೆ.
ಐದಾರು ಶವಗಳ ಮೂಳೆಗಳು ಒಂದೇ ಕಡೆ, ಅದರಲ್ಲೂ ನೆಲದ ಮೇಲ್ಗಡೆಯೇ ಇರುವುದು ಹೇಗೆ ಎನ್ನುವ ಕುತೂಹಲವೂ ವ್ಯಕ್ತವಾಗಿತ್ತು. ಅಲ್ಲದೆ, ಆ ಜಾಗದಲ್ಲಿ ವಾಮಾಚಾರ ನಡೆಸಿರುವ ಕುರುಹು ಇತ್ತೆಂದು ವಿಠಲ ಗೌಡ ಹೇಳಿಕೆಯಲ್ಲಿ ತಿಳಿಸಿದ್ದರು. ಆನಂತರ ಬೆಳ್ತಂಗಡಿಗೆ ಬಂದಿದ್ದ ಎಸ್ಐಟಿ ಮುಖ್ಯಸ್ಥ ಮೊಹಾಂತಿ, ಬಂಗ್ಲೆಗುಡ್ಡೆ ಕಾಡಿನಲ್ಲಿ ಪೂರ್ತಿಯಾಗಿ ಶೋಧ ಕಾರ್ಯ ಮಾಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ನೆಲ ಅಗೆಯುವುದಕ್ಕಿಂತಲೂ ಮೇಲ್ಭಾಗದಲ್ಲಿ ಇರುವ ಶವಗಳ ಮೂಳೆಗಳನ್ನು ಸಂಗ್ರಹಿಸಿ, ಅವೆಲ್ಲವೂ ಮನುಷ್ಯನದ್ದೇ ಎನ್ನುವ ಬಗ್ಗೆ ಅಧ್ಯಯನಕ್ಕೆ ಮುಂದಾಗಿದ್ದಾರೆ. ಕಾಡಿನ ಮಧ್ಯೆ ಇಷ್ಟೊಂದು ಮೂಳೆಗಳು ಸಿಕ್ಕಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನೂ ಎಸ್ಐಟಿ ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ. ಇದೀಗ ಶೋಧ ಕಾರ್ಯ ಸಂದರ್ಭದಲ್ಲಿ ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಸ್ಥಳದಲ್ಲಿ ಮನುಷ್ಯರನ್ನು ಕೊಲ್ಲಲಾಗಿದೆಯೇ, ವಾಮಾಚಾರಕ್ಕೆ ಬಳಸಲಾಗಿದೆಯೇ ಅಥವಾ ಹೂತ ಹೆಣಗಳ ಮೂಳೆಗಳೇ ಎಂಬ ಬಗ್ಗೆ ತನಿಖೆಯ ನಂತರವೇ ತಿಳಿಯಬೇಕು.
Discover more from Coastal Times Kannada
Subscribe to get the latest posts sent to your email.
Discussion about this post