ನವದೆಹಲಿ: ಬಿಜೆಪಿ ಸೋಮವಾರ ತನ್ನ ಹೊಸ ರಾಷ್ಟ್ರೀಯ ತಂಡವನ್ನು ಘೋಷಿಸಿದೆ. ಪಕ್ಷದ ಅಧ್ಯಕ್ಷ ನಿತಿನ್ ನಬಿನ್ ಅವರ ನೇತೃತ್ವದಲ್ಲಿ ಈ ತಂಡ ಕಾರ್ಯನಿರ್ವಹಿಸಲಿದೆ. ಈ ತಂಡದಲ್ಲಿ ಹಲವಾರು ಹೊಸ ಮುಖಗಳಿದ್ದು, ಅನುಭವ ಮತ್ತು ಯುವಕರ ಸಮ್ಮಿಶ್ರಣದಿಂದ ಕೂಡಿದೆ . ಮಹಿಳೆಯರಿಗೆ ಗಣನೀಯ ಪ್ರಾತಿನಿಧ್ಯ ನೀಡಲಾಗಿದೆ.
ಬಿಎಲ್ ಸಂತೋಷ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಹುದ್ದೆಯಲ್ಲೇ ಮುಂದುವರಿಯಲಿದ್ದಾರೆ. ಅಮೇಥಿಯ ಮಾಜಿ ಸಂಸದೆ ಸ್ಮೃತಿ ಇರಾನಿ, ತ್ರಿಪುರದ ಮಾಜಿ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್, ಸುನಿಲ್ ಬನ್ಸಾಲ್, ವಿನೋದ್ ತಾವ್ಡೆ, ಗಜೇಂದ್ರ ಪಟೇಲ್, ಸತೀಶ್ ಪೂನಿಯಾ, ಹರೀಶ್ ದ್ವಿವೇದಿ ಮತ್ತು ಸಂಜಯ್ ಭಾಟಿಯಾ ಅವರನ್ನು ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ. ನಿತಿನ್ ನಬಿನ್ ಪಕ್ಷದ ಮುಖ್ಯಸ್ಥರಾದ ಸುಮಾರು ಆರು ತಿಂಗಳ ನಂತರ ಈ ಘೋಷಣೆ ಬಂದಿದೆ.
ಪಕ್ಷವು ಹಲವಾರು ಹಿರಿಯ ನಾಯಕರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಅವರಲ್ಲಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಸಿಂಧಿಯಾ, ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್, ರಾಮ್ ಮಾಧವ್, ಬೈಜ್ಯಂತ್ ಜಯ್ ಪಾಂಡಾ, ಡಿ. ಪುರಂದೇಶ್ವರಿ, ರೇಖಾ ವರ್ಮಾ, ವರ್ಷಾಬೆನ್ ನರೇಂದ್ರಭಾಯಿ ದೋಷಿ, ಡಾ. ಭಾರತಿ ಪ್ರವೀಣ್ ಪವಾರ್, ಮನ್‌ಪ್ರೀತ್ ಸಿಂಗ್ ಬಾದಲ್, ಲಾಲ್ ಸಿಂಗ್ ಆರ್ಯ, ಕರ್ನಾಟಕದ ಪ್ರೊ. ಎಂ. ನಾಗರಾಜ, ಪ್ರೊ. ತಾರಿಕ್ ಮನ್ಸೂರ್ ಮತ್ತು ಡಾ. ಮಧುಚಂದ್ರ ಕಾರ್ ಸೇರಿದ್ದಾರೆ. 13 ರಾಷ್ಟ್ರೀಯ ಉಪಾಧ್ಯಕ್ಷರಲ್ಲಿ ಆರು ಮಂದಿ ಮಹಿಳೆಯರಿದ್ದಾರೆ.
ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ಕವಿತಾ ಪಾಟಿದಾರ್ (ಮಧ್ಯಪ್ರದೇಶ), ಕೆ. ಸುರೇಂದ್ರನ್ (ಕೇರಳ), ಡಾ. ಭೋಲಾ ಸಿಂಗ್ (ಉತ್ತರ ಪ್ರದೇಶ), ಪ್ರದೀಪ್ ವರ್ಮಾ (ಜಾರ್ಖಂಡ್), ಜಗದೀಶ್ ಈಶ್ವರಭಾಯಿ ಪಟೇಲ್ (ಗುಜರಾತ್), ಸಂದೀಪ್ ಪಾಠಕ್ (ದೆಹಲಿ), ಫಾಂಗ್ನಾನ್ ಕೊನ್ಯಾಕ್ (ನಾಗಾಲ್ಯಾಂಡ್), ಸಂಗೀತಾ ಯಾದವ್ (ಉತ್ತರ ಪ್ರದೇಶ), ಅನಿಲ್ ಆಂಟೋನಿ (ಕೇರಳ), ಎಂ. ವೆಂಕಟೇಶನ್ (ತಮಿಳುನಾಡು), ಮನೋಜ್ ಟಿಗ್ಗಾ (ಪಶ್ಚಿಮ ಬಂಗಾಳ), ಸಿದ್ಧಾರ್ಥ್ ಶಂಭು (ಬಿಹಾರ), ಸ್ವದೇಶ್ ಸಿಂಗ್ (ದೆಹಲಿ), ಮೃಗಾಂಕ ಡಿಯೋ ಬರ್ಮನ್ (ಅಸ್ಸಾಂ), ರೋಹನ್ ಗುಪ್ತಾ (ಗುಜರಾತ್) ಮತ್ತು ಜೈ ಪ್ರಕಾಶ್ (ದೆಹಲಿ) ಅವರನ್ನು ನೇಮಿಸಲಾಗಿದೆ. ಪಿಯೂಷ್ ಗೋಯಲ್ ಅವರನ್ನು ಮತ್ತೊಮ್ಮೆ ಪಕ್ಷದ ರಾಷ್ಟ್ರೀಯ ಖಜಾಂಚಿಯಾಗಿ ನೇಮಕ ಮಾಡಲಾಗಿದೆ.
ಯುವ ಮೋರ್ಚಾಕ್ಕೂ ಹೊಸ ಸಾರಥಿ : ಬಿಜೆಪಿ ಯುವ ಮೋರ್ಚಾದಲ್ಲೂ ಪ್ರಮುಖ ಬದಲಾವಣೆ ಮಾಡಲಾಗಿದೆ. ಈ ಹಿಂದೆ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಸ್ಥಾನ ಮುಂದುವರಿಸದೆ, ಗುಜರಾತ್ ಮೂಲದ ಡಾ. ಹೇಮಾಂಗ್ ಜೋಶಿ ಅವರನ್ನು ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಯುವ ಮತದಾರರನ್ನು ಸೆಳೆಯುವುದು ಹಾಗೂ ಮುಂಬರುವ ಚುನಾವಣೆಗಳಲ್ಲಿ ಯುವ ಸಂಘಟನೆಯನ್ನು ಬಲಪಡಿಸುವ ದೃಷ್ಟಿಯಿಂದ ಬದಲಾವಣೆ ಮಹತ್ವ ಪಡೆದಿದೆ.
ರಾಜ್ಯಸಭಾ ಸಂಸದ ತರುಣ್ ಚುಗ್ ಅವರನ್ನು ಕೇಂದ್ರ ಕಚೇರಿ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. ಗುಜರಾತ್ ಸಂಸದ ಹೇಮಾಂಗ್ ಜೋಶಿ ಅವರಿಗೆ ಯುವ ಮೋರ್ಚಾ ಉಸ್ತುವಾರಿ ವಹಿಸಲಾಗಿದ್ದು, ಮಹಿಳಾ ಮೋರ್ಚಾವನ್ನು ಛತ್ತೀಸ್‌ಗಢದ ರೂಪ್ ಕುಮಾರಿ ಚೌಧರಿ ನೋಡಿಕೊಳ್ಳಲಿದ್ದಾರೆ.
ಲೋಕಸಭಾ ಸಂಸದ ಅನಿಲ್ ಬಲುನಿ ಮಾಧ್ಯಮ ಸಂಚಾಲಕರಾಗಿ ಮುಂದುವರಿಯಲಿದ್ದಾರೆ. ಸಹ ಸಂಚಾಲಕರಾಗಿ ಆಶಿಶ್ ಉಷಾ ಅಗರ್ವಾಲ್ (ಮಧ್ಯಪ್ರದೇಶ), ಪ್ರದೀಪ್ ಭಂಡಾರಿ (ದೆಹಲಿ) ಮತ್ತು ಸಿದ್ಧಾರ್ಥ್ ಯಾದವ್ (ದೆಹಲಿ) ಇದ್ದಾರೆ. ಛತ್ತೀಸ್‌ಗಢದ ದೀಪಕ್ ಮಾಸ್ಕಿ ಅವರನ್ನು ಸಾಮಾಜಿಕ ಮಾಧ್ಯಮ ಸಂಚಾಲಕರಾಗಿ ಹೆಸರಿಸಲಾಗಿದೆ.
Discover more from Coastal Times Kannada
Subscribe to get the latest posts sent to your email.







Discussion about this post