ಮಂಗಳೂರು: ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಪೀಟರ್ ಪಾವ್ಲ್ ಸಲ್ಡಾನಾ ಅವರು ಮಂಗಳೂರಿನ ಅವರ್ ಲೇಡಿ ಅಫ್ ಹೋಲಿ ರೋಸರಿ ಪ್ರಧಾನಾಲಯದಲ್ಲಿ ಭಾನುವಾರ ದಿವ್ಯ ಬಲಿಪೂಜೆಯಲ್ಲಿ ಸಿನೊಡ್ 2021-2023ರ ಪ್ರಕ್ರಿಯೆಯನ್ನು ಧರ್ಮಪ್ರಾಂತ್ಯದ ಮಟ್ಟದಲ್ಲಿ ಸಿನೊಡ್ ಲಾಂಛನ ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿದರು.
ದಿವ್ಯ ಬಲಿಪೂಜೆಯಲ್ಲಿ ಯಾಜಕರು, ಧಾರ್ಮಿಕ ಸಹೋದರ-ಸಹೋದರಿಯರು ಹಾಗೂ ಭಕ್ತರು ಭಾಗವಹಿಸಿದ್ದರು. ಜತೆಯಲ್ಲಿ ಸಾಗುವ ಧರ್ಮಸಭೆಗಾಗಿ: ಅನ್ಯೋನ್ಯತೆ, ಸಹಭಾಗಿತ್ವ, ಮತ್ತು ಸುವಾರ್ತಾ ಪ್ರಸಾರ ಎಂಬುದು ಲಾಂಛನದಲ್ಲಿ ಚಿತ್ರಿಸಲಾದ ಸಿನೊಡ್‌ನ ವಿಷಯ.
ಪೋಪ್ ಫ್ರಾನ್ಸಿಸ್ ವ್ಯಾಟಿಕನ್ ನಗರದಲ್ಲಿ ಅ.9, 10ರಂದು ಸಮಾಲೋಚನೆ ಮತ್ತು ವಿವೇಚನೆಯ ಮೂರು ವರ್ಷಗಳ ಸಿನೊಡಲ್ ಪ್ರಯಾಣ ಆರಂಭಿಸಿ, ರೋಮ್‌ನಲ್ಲಿ 2023 ಅಕ್ಟೋಬರ್‌ನಲ್ಲಿ ನಡೆಯಲಿರುವ ಸಭೆಯೊಂದಿಗೆ ಮುಕ್ತಾಯಗೊಳ್ಳುತ್ತದೆ. ಈ ಪ್ರಕ್ರಿಯೆಯು ಮೂರು ಹಂತಗಳನ್ನು ಒಳಗೊಂಡಿದೆ. ಧರ್ಮಕ್ಷೇತ್ರ, ಭೂಖಂಡ ಮತ್ತು ಸಾರ್ವತ್ರಿಕ. ವ್ಯಾಟಿಕನ್ ನಗರದಲ್ಲಿ ನಡೆಯಲಿರುವ ಧರ್ಮಾಧ್ಯಕ್ಷರು ಸಭೆಗಾಗಿ, ಜಾಗತಿಕ ಧರ್ಮಸಭೆಯ ಸಿದ್ಧತೆಯ ಭಾಗವಾಗಿ ಧರ್ಮಪ್ರಾಂತ್ಯ ಪೂರ್ವಸಿದ್ಧತಾ ದಾಖಲೆ ಮತ್ತು ಮಾಹಿತಿ ನೀಡುವ ಕೈಪಿಡಿ ಪುಸ್ತಕ(ವದೆಮೆಕುಮ್)ನೀಡಿಲಾಗಿದೆ ಎಂದು ಧರ್ಮಾಧ್ಯಕ್ಷರು ಹೇಳಿದರು.
ಧರ್ಮಪ್ರಾಂತ್ಯದ ಶ್ರೇಷ್ಠ ಗುರು ಮ್ಯಾಕ್ಸಿಮ್ ಎಲ್.ನೊರೊನ, ಧರ್ಮಾಧ್ಯಕ್ಷರ ಧಾರ್ಮಿಕ ಪ್ರತಿನಿಧಿ ಹಾಗೂ ಸಿಎಪಿ ಪಾಲ್ ಮೆಲ್ವಿನ್ ಡಿಸೋಜ, ಸಿನೊಡಲ್ ಪ್ರಕ್ರಿಯೆಯ ಮುಖ್ಯ ಕಾರ್ಯನಿರ್ವಾಹಕ ಜೋಸೆಫ್ ಮಾರ್ಟಿಸ್, ಅವರ್ ಲೇಡಿ ಅಫ್ ಹೋಲಿ ರೋಸರಿ ಪ್ರಧಾನಾಲಯದ ಮುಖ್ಯಸ್ಥ ಆಲ್ಫ್ರೆಡ್ ಪಿಂಟೊ ಮೊದಲಾದವರು ಉಪಸ್ಥಿತರಿದ್ದರು.
21ರಂದು ಉರ್ವದಲ್ಲಿ ಸಮಾರಂಭ: ಧರ್ಮಪ್ರಾಂತ್ಯದಲ್ಲಿ ಸಿನೊಡಲ್ ಪ್ರಕ್ರಿಯೆ ಚರ್ಚಿಸಲು ಯಾಜಕರಿಗೆ, ಧಾರ್ಮಿಕ ಸಹೋದರ ಸಹೋದರಿಯರಿಗೆ, ಕನ್ಯಾ ಭಗಿನಿಯರಿಗೆ ಮತ್ತು ಧರ್ಮಪ್ರಾಂತ್ಯದ ಪಾಲನಾ ಸದಸ್ಯರಿಗೆ ಅಧ್ಯಯನ ಅಧಿವೇಶನ ಅ.21ರಂದು ಉರ್ವ ಧರ್ಮಕೇಂದ್ರದಲ್ಲಿ ಆಯೋಜಿ ಸಲಾಗಿದೆ ಎಂದು ಧರ್ಮಾಧ್ಯಕ್ಷರು ತಿಳಿಸಿದರು. ಧರ್ಮಪ್ರಾಂತ್ಯದ ಪಾಲನಾ ಸಭೆಯ 50ನೇ ವಾರ್ಷಿಕೋತ್ಸವ ಸಮಾರಂಭವೂ ಜರುಗಲಿದೆ ಎಂದರು.