ಬೆಂಗಳೂರು: ರಂಗಭೂಮಿ, ಸಿನಿಮಾ ಮತ್ತು ಕಿರುತೆರೆಯ ಹಿರಿಯ ನಟ ಶಂಕರ್ ರಾವ್ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿನಿಂದ ವಯೋಸಹಜ ಆನಾರೋಗ್ಯದಿಂದ ಬಳಲುತ್ತಿದ್ದ ಶಂಕರ್ ರಾವ್ ಬೆಂಗಳೂರಿನ ಅರಕೆರೆಯಲ್ಲಿನ ಸ್ವಗೃಹದಲ್ಲಿ ಇಂದು ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.
ಮೂಲತಃ ಹವ್ಯಾಸಿ ರಂಗಭೂಮಿ ಕಲಾವಿದರಾದ ಶಂಕರ್ ರಾವ್ ನೂರಕ್ಕೂ ಹೆಚ್ಚು ಸಿನಿಮಾಗಳು ಹಾಗೂ ಹತ್ತಾರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. 1972 ರಿಂದ ಇತ್ತೀಚಿನವರೆಗೂ ಶಂಕರ್ ರಾವ್ ‘ನಟರಂಗ’ ರಂಗತಂಡದ ಸಕ್ರಿಯ ಕಲಾವಿದರಾಗಿದ್ದರು.
ಶಾಲಾ ದಿನಗಳಲ್ಲೇ ನಾಟಕಗಳತ್ತ ಆಕರ್ಷಿತರಾದ ಶಂಕರ್ ರಾವ್ ತಮ್ಮದೇ ‘ಗೆಳೆಯರ ಬಳಗ’ ರಂಗತಂಡ ಕಟ್ಟಿ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಸಿಮ್ಸನ್ ಅಂಡ್ ಸಿಮ್ಸನ್ ಕಂಪನಿಯಲ್ಲಿ ನೌಕರಿ ಮಾಡುತ್ತಲೇ ‘ಕಲಾಕುಂಜ’, ‘ನಟರಂಗ’ ರಂಗತಂಡಗಳ ಮೂಲಕ ಹಲವು ನಾಟಕಗಳಲ್ಲಿ ನಟಿಸುತ್ತಾ ಬಂದರು. ‘ನಟರಂಗ’ದ ಬಹುತೇಕ ಎಲ್ಲಾ ನಾಟಕಗಳಲ್ಲಿ ಅವರು ಅಭಿನಯಿಸಿದ್ದಾರೆ. ಕಾಕನಕೋಟೆ, ತೊಘಲಕ್, ಮೃಚ್ಛಕಟಿಕ ಪೋಲಿ ಕಿಟ್ಟಿ.. ಅವರ ಕೆಲವು ಪ್ರಮುಖ ನಾಟಕಗಳು. ಎಂ.ಆರ್.ವಿಠಲ್ ನಿರ್ದೇಶನದ ‘ಯಾರ ಸಾಕ್ಷಿ?’ (1972) ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದ ಶಂಕರ್ ರಾವ್ ಕಾಕನಕೋಟೆ, ಸಿಂಹಾಸನ, ಪುಟಾಣಿ ಏಜೆಂಟ್ 123, ಮೂಗನಸೇಡು, ಕಲ್ಯಾಣ ಮಂಟಪ.. ಸೇರಿದಂತೆ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಸೆಕೆಂಡ್ ಹ್ಯಾಂಡ್ ಸದಾಶಿವ, ಪಲ್ಲವಿ, ಫೊಟೋಗ್ರಾಫರ್ ಪರಮೇಶಿ, ಯಾಕಿಂಗಾಡ್ತಾರೋ, ಪಾಪ ಪಾಂಡು, ಸಿಲ್ಲಿಲಲ್ಲಿ.. ಅವರು ಅಭಿನಯಿಸಿರುವ ಕೆಲವು ಪ್ರಮುಖ ಧಾರಾವಾಹಿಗಳು. ಶಂಕರ್ ರಾವ್ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಪತ್ನಿ ಉಮಾ ಕಳೆದ ವರ್ಷ ನಿಧನರಾಗಿದ್ದರು. ಶಂಕರ್ ರಾವ್ ನಿಧನಕ್ಕೆ ರಂಗಭೂಮಿ, ಸಿನಿಮಾ ಮತ್ತು ಕಿರುತೆರೆ ಕ್ಷೇತ್ರದ ಹಲವರು ಕಂಬನಿ ಮಿಡಿದಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post