ಮಂಗಳೂರು, ನ.18; ಕರಾವಳಿಯಲ್ಲಿ ಮಳೆ ಎಷ್ಟು ಭೀಕರವೋ ಬೇಸಿಗೆ ಸಹ ಅಷ್ಟೇ ಕಠಿಣ. ಬಿರು ಬೇಸಿಗೆ ಎಂತವರ ಮೈಯಲ್ಲೂ ನೀರಿಳಿಸುತ್ತದೆ. ಕೇವಲ ಹತ್ತು ನಿಮಿಷ ಬಿಸಿಲಿನಲ್ಲಿ ನಿಂತುಕೊಂಡರೇ ಚರ್ಮ ಸುಡುವಂತೆ ಭಾವವಾಗುತ್ತದೆ. ಮಕ್ಕಳಿಗೆ ಬೇಸಿಗೆ ಬಿಸಿ ತಪ್ಪಿಸಲು, ಹಸಿರ ಮಹತ್ವವನ್ನು ತಿಳಿಸಲು ಪುತ್ತೂರು ಸರ್ಕಾರಿ ಶಾಲೆ ವಿಶೇಷ ಪ್ರಯತ್ನ ನಡೆಸಿ ಈಗ ಯಶಸ್ವಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೆಯ್ಯೂರಿನ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ವಿಶೇಷ ತರಗತಿ ಈಗ ಎಲ್ಲರ ಮೆಚ್ಚುಗೆ ಗಳಿಸಿದೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವ ಈ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ನಡೆಸಲು ಕೊಠಡಿಗಳ ಸಮಸ್ಯೆ ಎದುರಾದಾಗ ಸ್ಥಳೀಯ ಕೃಷಿಕರ ಸಹಾಯದಿಂದ ತೆಂಗಿನ ಹಾಗೂ ಅಡಿಕೆ ಗರಿಗಳನ್ನು ಬಳಸಿ ಕ್ಲಾಸ್ ರೂಂ ನಿರ್ಮಿಸುವ ಮೂಲಕ ಈ ಶಾಲೆ ಎಲ್ಲರ ಗಮನ ಸೆಳೆದಿತ್ತು.
ಬೇಸಿಗೆಯ ಬಿಸಿಲಿಗೆ ತಂಪನ್ನೆರೆಯುವ ಈ ಕ್ಲಾಸ್ ರೂಂನಲ್ಲಿ ಕುಳಿತುಕೊಳ್ಳಲು ವಿದ್ಯಾರ್ಥಿಗಳು ಖುಷಿಯನ್ನೂ ಪಡುತ್ತಿದ್ದರು. ಈಗ ಈ ಶಾಲೆಯಲ್ಲಿ ಇದೇ ರೀತಿಯ ಪ್ರಕೃತಿದತ್ತ ಕ್ಲಾಸ್ ರೂಂಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನೂ ನೀಡಲಾಗುತ್ತಿದೆ. ಮಕ್ಕಳಿಗೆ ಹಸಿರು, ಮರ ಗಿಡಗಳ ಮಹತ್ವವನ್ನು ಕೇವಲ ಪುಸ್ತಕದ ಪಾಠದಲ್ಲಿ ಮಾತ್ರ ಹೇಳಿಕೊಡದೇ, ನಿಜವಾಗಿಯೂ ಹಸಿರಿನ ಅರಿವು ಮೂಡಿಸುತ್ತಿರುವ ಶಿಕ್ಷಕರ ಶ್ರಮ ಅಭಿನಂದನಾರ್ಹವಾದದ್ದು.
ರಂಗ ಮಂದಿರದಲ್ಲೇ ಶಾಲೆ ತರಗತಿ:
ಮಕ್ಕಳ ಮನೋರಂಜನಾ ಕಾರ್ಯಕ್ರಮಗಳಿಗಾಗಿ ನಿರ್ಮಿಸಲಾಗಿರುವ ರಂಗಮಂಟಪದಲ್ಲಿ ಈ ಶಾಲೆಯ ಮಕ್ಕಳಿಗೆ ತರಗತಿಯನ್ನು ಕೇಳುವ ಅವಕಾಶವನ್ನು ಕಲ್ಪಿಸಲಾಗಿದೆ. ಇತರ ಶಾಲೆಗಳ ರಂಗಮಂದಿರಗಳಿಗಿಂತ ವಿಭಿನ್ನವಾಗಿರುವ ಈ ರಂಗಮಂದಿರದ ಮೇಲ್ಫಾವಣಿ ಸಂಪೂರ್ಣ ಹಸಿರ ಬಳ್ಳಿಗಳಿಂದಲೇ ತುಂಬಿದ್ದು, ಬೇಸಿಗೆಯಲ್ಲಿ ತಂಪನೆಯ ವಾತಾವರಣವನ್ನು ಸೃಷ್ಟಿಸುತ್ತದೆ. ಈ ಕಾರಣಕ್ಕಾಗಿಯೇ ಈ ಶಾಲೆಯ ಪ್ರತೀ ತರಗತಿಯ ಮಕ್ಕಳಿಗೂ ದಿನಕ್ಕೆ ಒಂದೋ, ಎರಡೋ ಗಂಟೆಗಳ ಕಾಲ ಇದೇ ಹಸಿರು ಹೊದಿಕೆಯ ರಂಗಮಂಟಪದಲ್ಲಿ ಪಾಠ ಮಾಡಲಾಗುತ್ತದೆ.
ಗಿಡ, ಬಳ್ಳಿಗಳ ನಿರ್ವಹಣೆ: ಬೇಸಿಗೆಯ ಬಿಸಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರದಿರಲಿ ಎನ್ನುವ ಕಾರಣಕ್ಕಾಗಿ ಈ ವ್ಯವಸ್ಥೆಯನ್ನು ಈ ಶಾಲೆಯಲ್ಲಿ ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಮಂಟಪದ ಮೇಲ್ಫಾವಣಿಯಲ್ಲಿ ಆರೋಗ್ಯಕ್ಕೆ ಯಾವುದೇ ದುಷ್ಪರಿಣಾಮವನ್ನು ಬೀರದ ಗಿಡ, ಬಳ್ಳಿಗಳನ್ನು ಬೆಳೆಸಲಾಗಿದೆ. ಪ್ರತಿ ವರ್ಷವೂ ಇವುಗಳ ನಿರ್ವಹಣೆಯನ್ನೂ ಮಾಡಲಾಗುತ್ತಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಈ ಮಂಟಪವನ್ನು ಹಸಿರ ಹೊದಿಕೆಯ ಮೇಲ್ಫಾವಣಿಯನ್ನಾಗಿ ರೂಪಿಸಬೇಕು ಎನ್ನುವ ಉದ್ಧೇಶದಿಂದಲೂ ಈ ಶಾಲೆಯ ಸಿಬ್ಬಂದಿಗಳು ನಾಲ್ಕು ವಿದಧ ಬಳ್ಳಿಗಳನ್ನು ನೆಟ್ಟಿದ್ದಾರೆ.
ಫ್ಯಾಷನ್ ಫ್ಲೋರಾ, ಡೆನ್ ಬರ್ಜಿಯಾ ಗ್ರ್ಯಾಂಡಿ ಫ್ಲೋರಾ ಮತ್ತು ಫ್ಯಾಷನ್ ಫ್ರುಟ್ ಬಳ್ಳಿಗಳನ್ನು ಈ ಮೇಲ್ಫಾವಣಿಗೆ ಬಿಡಲಾಗಿದೆ. ನಾಲ್ಕು ವರ್ಷದ ಅವಧಿಯಲ್ಲಿ ಅತ್ಯಂತ ಸಮೃದ್ಧವಾಗಿ ಬೆಳೆದು ಮೇಲ್ಫಾವಣಿ ತುಂಬಾ ಅವರಿಸಿಕೊಂಡಿರುವ ಈ ಬಳ್ಳಿಗಳು ಹಲವು ರೀತಿಯ ಪಕ್ಷಿಗಳಿಗೂ ವಾಸಸ್ಥಾನವಾಗಿದೆ. ಪ್ರತಿ ದಿನವೂ ಹನಿ ನೀರಾವರಿ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದ್ದು, ಶಾಲೆಯ ಮಕ್ಕಳು ಈ ಗಿಡಗಳನ್ನು ಪೋಷಿಸಿ, ಸಂರಕ್ಷಿಸುತ್ತಿದ್ದಾರೆ.