ಮಂಗಳೂರು, ನ. 18: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚಿರತೆಗಳು ಕಾಟ ಆರಂಭವಾಗಿದೆ. ವಿಮಾನ ನಿಲ್ದಾಣದ ರನ್‌ವೇ ಬಳಿ ಕೆಲ ದಿನಗಳ ಹಿಂದೆ ರಾತ್ರಿ ಹೊತ್ತು ಹಲವು ಬಾರಿ ಚಿರತೆಗಳು ಪ್ರತ್ಯಕ್ಷವಾಗಿದ್ದು, ಅಪಾಯದ ಕರೆಘಂಟೆ ಬಾರಿಸಿದೆ.
ಈ ಹಿನ್ನಲೆಯಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ವಿಮಾನ ನಿಲ್ದಾಣದ ಆವರಣದಲ್ಲಿ ಕಾರ್ಯಾಚರಣೆ ಆರಂಭಿಸಿದ್ದಾರೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಚಿರತೆ ಭಯ ಶುರುವಾಗಿದ್ದು, ವಿಮಾನ ನಿಲ್ದಾಣದ ಪ್ರದೇಶದಲ್ಲಿ ರಾತ್ರಿ ವೇಳೆ ರನ್‌ವೇ ಬಳಿ ಚಿರತೆ ಓಡಾಟ ಕಂಡುಬಂದಿವೆ. ಇದು ವಿಮಾನ ನಿಲ್ದಾಣದ ಭದ್ರತಾ ವಿಭಾಗದ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಚಿರತೆ ಮಾತ್ರವಲ್ಲದೆ ನವಿಲು, ಕಾಡು ಹಂದಿ ಸೇರಿದಂತೆ ನರಿಗಳು ರನ್ ವೇ ಬಳಿ ಕಂಡು ಬರುತ್ತಿವೆ.
ಅರಣ್ಯ ಇಲಾಖೆಯ ಪ್ರಾಣಿ ಸರ್ವೇ ವರದಿ ಪ್ರಕಾರ ಕಳೆದ ಐದು ವರ್ಷಗಳ ಹಿಂದೆ ಮಂಗಳೂರು ರೇಂಜ್ ವ್ಯಾಪ್ತಿಯಲ್ಲಿ 2-3 ಚಿರತೆಗಳಿದ್ದವು. ಆದರೆ ಪ್ರಸ್ತುತ ಇವುಗಳ ಸಂಖ್ಯೆ 9ಕ್ಕೆ ಏರಿಕೆಯಾಗಿದೆ ಎಂದು ಹೇಳಲಾಗಿದೆ.
ಬಜ್ಪೆಯ ಕೆಂಜಾರಿನಲ್ಲಿ ಗುಡ್ಡದ ಮೇಲಿರುವ ವಿಮಾನ ನಿಲ್ದಾಣದ ಸುತ್ತಮುತ್ತ ಕಾಡು ಪರಿಸರವಿದ್ದು, ಚಿರತೆಗಳ ಓಡಾಟ ಸಾಮಾನ್ಯ ಎಂದು ಹೇಳಲಾಗಿದೆ. ಆದರೆ ಕಳೆದ ಕೆಲವು ದಿನಗಳಿಂದ ರಾತ್ರಿ ಹೊತ್ತು ಚಿರತೆಗಳು ವಿಮಾನ ನಿಲ್ದಾಣ ಪ್ರವೇಶಿಸುತ್ತಿವೆ. ಕಳೆದ ಕೆಲವು ದಿನಗಳಿಂದ ಚಿರತೆ ರನ್‌ವೇ ಸುತ್ತ ಕಾಣಿಸಿಕೊಳ್ಳುತ್ತಿವೆ.
ಆಹಾರ ಅರಸಿ ಆಕಸ್ಮಿಕವಾಗಿ ಬಂದಿರಬಹುದು ಅಂದುಕೊಂಡಿದ್ದ ಅಧಿಕಾರಿಗಳಿಗೆ ಇತ್ತೀಚೆಗೆ ಸರಾಗವಾಗಿ ಚಿರತೆಗಳು ಕಾಣಿಸಿಕೊಳ್ಳುತ್ತಿವೆ. ವಿಮಾನ ಲ್ಯಾಂಡಿಂಗ್ ಅಥವಾ ಟೇಕ್‌ಆಫ್ ಸಂದರ್ಭ ರನ್‌ವೇ ಆಸುಪಾಸು ಪ್ರಾಣಿಗಳ ಓಡಾಟ ತೀರಾ ಅಪಾಯಕಾರಿಯಾದ ಹಿನ್ನೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ.
ಚಿರತೆಗಳಿಂದ ಭಯಗೊಂಡಿರುವ ಮಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು, ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ. ಅಧಿಕಾರಿಗಳ ಮನವಿ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯೂ ಚುರುಕಾಗಿದ್ದು, ಚಿರತೆ ಪತ್ತೆ ಕಾರ್ಯಾಚರಣೆ ಆರಂಭಿಸಿದೆ.
ಚಿರತೆಗಳ ಓಡಾಟದಿಂದ ಮಂಗಳೂರು ವಿಮಾನ ನಿಲ್ದಾಣ ನಿಲ್ದಾಣದ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಯಪಡುವ ಅವಶ್ಯಕತೆಯಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ವಿಮಾನ ನಿಲ್ದಾಣ ಸುತ್ತಮುತ್ತಲಲ್ಲಿ ಚಿರತೆಯ ಚಲನವಲನ ಕಂಡುಬಂದರೆ ಇಲಾಖೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ವಿನಂತಿಸಲಾಗಿದ್ದು, ಚಿರತೆ ಸೆರೆ ಹಿಡಿಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ತೀವ್ರ ನಿಗಾ ವಹಿಸಿದ್ದಾರೆ.
ಚಿರತೆ ಸೆರೆ ಹಿಡಿಯಲು ವಿಮಾನ ನಿಲ್ದಾಣದ ಒಳಗೆ 3 ಬೋನುಗಳನ್ನು ಇಡಲಾಗಿದೆ. ಸುತ್ತಲಿನ ಅರಣ್ಯ ಪ್ರದೇಶದಲ್ಲೂ 2 ಬೋನು ಇಡಲಾಗಿದೆ. ಒಟ್ಟು 5 ಬೋನುಗಳನ್ನು ಅಳವಡಿಸಲಾಗಿದೆ ಎಂದು ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ದಿನೇಶ್ ಕುಮಾರ್ ಹೇಳಿದ್ದಾರೆ.