ಉಡುಪಿ: ಬಿಜೆಪಿ ಮುಖಂಡ ಯಶಪಾಲ್ ಸುವರ್ಣ ಮತ್ತು ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ ತಲೆ ತೆಗೆದರೆ 20 ಲಕ್ಷ ಬಹುಮಾನ ಕೊಡುವುದಾಗಿ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಪ್ರಕರಣದಲ್ಲಿ ಪೊಲೀಸರು ಮಂಗಳೂರಿನ ಬಜ್ಪೆ ನಿವಾಸಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಜ್ಪೆ ನಿವಾಸಿ ಮಹಮ್ಮದ್ ಶಫಿ (26) ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಬಿಜೆಪಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ವಿರುದ್ಧ ಮಾರಿ ಗುಡಿ ಇನ್ಸ್ಟಾಗ್ರಾಮ್ ಪೇಜ್ ಮೂಲಕ ಬೆದರಿಕೆ ಹಾಕಲಾಗಿತ್ತು. ಈ ಬಗ್ಗೆ ಯುವಮೋರ್ಚಾ ಕಾಪು ಕ್ಷೇತ್ರ ಸಮಿತಿ ಅಧ್ಯಕ್ಷ ಸಚಿನ್ ಸುವರ್ಣ ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು.
ಮಂಗಳೂರಿನ ಬಜ್ಪೆ ನಿವಾಸಿ ಮಹಮ್ಮದ್ ಶಾಫಿ ಬಂಧಿತ ಆರೋಪಿ. ಈತ ಮಾರಿ ಗುಡಿ ಇನ್ಸ್ಟಾಗ್ರಾಮ್ ಪೇಜ್ ಮೂಲಕ ಯಶ್‌ಪಾಲ್ ಸುವರ್ಣ ಹತ್ಯೆ ಮಾಡಿದವರಿಗೆ ₹ 10 ಲಕ್ಷ ನೀಡುವುದಾಗಿ ಸಂದೇಶ ಹಾಕಿದ್ದ . ಆರೋಪಿಯು ಲಾಜಿಸ್ಟಿಕ್ ಸಂಸ್ಥೆಯಲ್ಲಿ ದುಡಿಯುತ್ತಿದ್ದು ಲಾರಿಗಳ ಸೂಪರ್ ವೈಸರ್ ಆಗಿದ್ದ ಎನ್ನಲಾಗುತ್ತಿದೆ ಆರೋಪಿಯು ಕೃತ್ಯ ಎಸಗಲು ಬಳಸಿದ ಐಪಿ ವಿಳಾಸವನ್ನು ಭೇದಿಸಿದ ಪೊಲೀಸರು ಆತನ ಇರುವನ್ನು ಪತ್ತೆ ಹಚ್ಚಿದ್ದರು. ಇದರ ಜಾಡು ಹಿಡಿದು ಹೋದ ಪೊಲೀಸರು ಆರೋಪಿಯನ್ನು ಮಂಗಳೂರಿನ ಬಜ್ಪೆಯ ತಾರಿಕಾಂಬಳ ಬಸ್ ನಿಲ್ದಾಣದ ಬಳಿ ಬಂಧಿಸಿದ್ದಾರೆ.
ಪ್ರಕರಣ ದಾಖಲಾದ ಬೆನ್ನಲ್ಲೇ ಕಾರ್ಕಳ ಉಪ ವಿಭಾಗದ ಎಎಸ್ಪಿ ಎಸ್.ವಿಜಯಪ್ರಸಾದ್, ಸೈಬರ್ ಪೊಲೀಸ್ ಠಾಣೆಯ ಸಿಬಂದಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ತನಿಖೆ ನಡೆಸಿದಾಗ ಬೆದರಿಕೆ ಪೋಸ್ಟ್ ಹಾಕಿದ್ದು ಬಜ್ಪೆ ನಿವಾಸಿ ಮಹಮ್ಮದ್ ಶಾಫಿ ಎಂದು ಮಾಹಿತಿ ಸಂಗ್ರಹಿಸಿದ್ದರು. ಬಳಿಕ ಉಡುಪಿ ಎಸ್ಪಿ ವಿಷ್ಣುವರ್ಧನ್ ಆರೋಪಿ ಪತ್ತೆಗೆ ಕಾಪು ಸಿಪಿಐ ಪ್ರಕಾಶ್, ಪಿಎಸ್ಐ ಶೈಲ ಡಿ.ಎಂ. ನೇತೃತ್ವದಲ್ಲಿ ತಂಡ ರಚಿಸಿದ್ದು ಆರೋಪಿಯನ್ನು ಬಜ್ಪೆ ತಾರಿಕಂಬಳ ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆ ಸಂದರ್ಭದಲ್ಲಿ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು ಆರು ತಿಂಗಳ ಹಿಂದೆ ಸ್ನೇಹಿತ ಆಸಿಫ್ ಜೊತೆ ಸೇರಿಕೊಂಡು ಮಾರಿಗುಡಿ ಹೆಸರಲ್ಲಿ ಇನ್ ಸ್ಟಾ ಗ್ರಾಮ್ ಪೇಜ್ ತೆರೆದಿದ್ದಾಗಿ ತಿಳಿಸಿದ್ದಾನೆ. ಅಲ್ಲದೆ, ಯಶಪಾಲ್ ಸುವರ್ಣ ಹಾಗೂ ಪ್ರಮೋದ್ ಮುತಾಲಿಕ್ ತಲೆ ಕಡಿದರೆ 20 ಲಕ್ಷ ಎಂದು ಪೋಸ್ಟ್ ಹಾಕಿದ್ದಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ಕೋರ್ಟಿಗೆ ಹಾಜರುಪಡಿಸಿ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.