ನವದೆಹಲಿ: ಅಲ್ಪಾವಧಿ ಕರ್ತವ್ಯದ ಸೇನಾ ನೇಮಕಾತಿ ಯೋಜನೆ ‘ಅಗ್ನಿಪಥ’ ವಿರೋಧಿಸಿ ದೇಶದ ವಿವಿಧ ಭಾಗಗಳಲ್ಲಿ ತೀವ್ರತರವಾದ ಪ್ರತಿಭಟನೆ ನಡೆಯುತ್ತಿದ್ದರೂ ಯೋಜನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸೇನೆಯು ಭಾನುವಾರ ಸ್ಪಷ್ಟಪಡಿಸಿದೆ. ನೇಮಕಾತಿ ಪ್ರಕ್ರಿಯೆಯ ಕರಡು ವೇಳಾಪಟ್ಟಿಯನ್ನು ರಕ್ಷಣಾ ಪಡೆಗಳ ಮೂರೂ ವಿಭಾಗಗಳು ಪ್ರಕಟಿಸಿವೆ. ಸಶಸ್ತ್ರ ಪಡೆಗಳ ಯೋಧರ ಸರಾಸರಿ ವಯಸ್ಸನ್ನು ಕಡಿತ ಮಾಡುವುದೇ ಅಗ್ನಿಪಥ ಯೋಜನೆಯ ಉದ್ದೇಶ ಎಂದು ಸೇನೆಯು ತಿಳಿಸಿದೆ.
ಅಗ್ನಿಪಥ ಯೋಜನೆಗೆ ಸಂಬಂಧಿಸಿ ಸರ್ಕಾರ ಕೈಗೊಂಡ ಪೂರಕ ಕ್ರಮಗಳಿಗೆ ದೇಶದ ವಿವಿಧೆಡೆ ನಡೆದ ಪ್ರತಿಭಟನೆಗಳು ಕಾರಣವಲ್ಲ. ಈ ದಿಸೆಯಲ್ಲಿ ಸರ್ಕಾರವು ಮೊದಲೇ ಚಿಂತನೆ ಆರಂಭಿಸಿತ್ತು ಎಂದು ಸೇನಾ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಅನಿಲ್ ಪುರಿ ಹೇಳಿದ್ದಾರೆ. ಯೋಜನೆಯನ್ನು ವಿರೋಧಿಸಿ ನಡೆದ ಹಿಂಸಾಚಾರದಲ್ಲಿ ಭಾಗಿಯಾದವರಿಗೆ ಸೇನೆಯ ಯಾವುದೇ ವಿಭಾಗಕ್ಕೆ ಸೇರಲು ಅವಕಾಶ ಇಲ್ಲ. ನೇಮಕಾತಿಗೆ ಮುನ್ನ ಪ್ರತಿಯೊಬ್ಬರ ಬಗ್ಗೆಯೂ ಪೊಲೀಸ್ ಪರಿಶೀಲನೆ ನಡೆಯಲಿದೆ. ಯಾವುದೇ ರೀತಿಯ ಅಶಿಸ್ತಿಗೆ ಸಶಸ್ತ್ರ ಪಡೆಯಲ್ಲಿ ಅವಕಾಶ ಇಲ್ಲ. ಅಗ್ನಿಪಥ ಯೋಜನೆಯ ಭಾಗವಾಗಲು ಬಯಸುವವರು ತಾವು ದೊಂಬಿಯಲ್ಲಿ ಭಾಗವಹಿಸಿಲ್ಲ ಎಂಬ ಪ್ರಮಾಣಪತ್ರ ಸಲ್ಲಿಸಬೇಕು ಎಂದು ಪುರಿ ಅವರು ವಿವರಿಸಿದ್ದಾರೆ.
ವರ್ಷಗಳ ಚಿಂತನೆ ಮತ್ತು ವಿವಿಧ ದೇಶಗಳಲ್ಲಿ ಇರುವ ಸೈನಿಕರ ಕರ್ತವ್ಯದ ಅವಧಿ ಬಗ್ಗೆ ಅಧ್ಯಯನ ನಡೆಸಿದ ಬಳಿಕವೇ ಈ ಯೋಜನೆಯನ್ನು ಪ್ರಕಟಿಸಲಾಗಿದೆ. 1999ರ ಕಾರ್ಗಿಲ್ ಯುದ್ಧದ ಬಗ್ಗೆ ಅಧ್ಯಯನ ನಡೆಸಿದ್ದ ಉನ್ನತಾಧಿಕಾರ ಸಮಿತಿ ಕೂಡ ಇಂತಹದೇ ಸಲಹೆ ನೀಡಿತ್ತು ಎಂದು ಪುರಿ ತಿಳಿಸಿದ್ದಾರೆ. ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಯ ಮುಖ್ಯಸ್ಥರ ಜತೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಾತುಕತೆ ನಡೆಸಿದ ಕೆಲವೇ ತಾಸುಗಳಲ್ಲಿ ಸೇನೆಯ ಮೂರೂ ವಿಭಾಗಗಳ ಮಾಧ್ಯಮಗೋಷ್ಠಿ ನಡೆದಿದೆ.
Discover more from Coastal Times Kannada
Subscribe to get the latest posts sent to your email.
Discussion about this post