ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ಮಹಾತ್ಮ ಗಾಂಧಿ ಅವರ ಮೊಮ್ಮಗ, ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರು ಸೋಮವಾರ ನಿರಾಕರಿಸಿದ್ದಾರೆ. ಹಾಗಾಗಿ, ವಿರೋಧ ಪಕ್ಷಗಳು ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಅವರನ್ನು ಜಂಟಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಚಿಂತನೆ ನಡೆಸಿವೆ.
‘ಬಿಜೆಪಿಯ ಮಾಜಿ ನಾಯಕ ಸಿನ್ಹಾ ಅವರು ಕಳೆದ ವರ್ಷ ತೃಣಮೂಲ ಕಾಂಗ್ರೆಸ್‌ಗೆ (ಟಿಎಂಸಿ) ಸೇರ್ಪಡೆಯಾಗಿದ್ದಾರೆ. ಸಿನ್ಹಾ ಅವರನ್ನು ವಿರೋಧ ಪಕ್ಷಗಳ ಕೆಲವು ನಾಯಕರು ಪ್ರಸ್ತಾಪಿಸಿದ್ದು, ಬೆಂಬಲವನ್ನೂ ವ್ಯಕ್ತಪಡಿಸಿವೆ’ ಎಂದು ಟಿಎಂಸಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
‘ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಅವರಿಗೆ ಸಿನ್ಹಾ ಅವರ ಹೆಸರನ್ನು ಸೂಚಿಸುವ ಫೋನ್ ಕರೆಗಳು ಬಂದಿವೆ. ಮಮತಾ ಕೂಡಾ ಸಿನ್ಹಾ ಅವರನ್ನು ವಿರೋಧ ಪಕ್ಷದ ಜಂಟಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲು ಆಸಕ್ತಿ ತೋರಿದ್ದಾರೆ’ ಎಂದೂ ಅವರು ಹೇಳಿದ್ದಾರೆ. ವಿರೋಧ ಪಕ್ಷಗಳು ಗೋಪಾಲಕೃಷ್ಣ ಅವರ ಮನವೊಲಿಸುವ ಸಾಧ್ಯತೆಯಿದ್ದು, ಆದರೆ, ಅವರು ಸ್ಪರ್ಧೆಗೆ ಒಪ್ಪಿಕೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ. ಈ ಹಿಂದೆ ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗಿ ಸ್ಪರ್ಧಿಸುವ ಪ್ರಸ್ತಾವವನ್ನು ಮಹಾರಾಷ್ಟ್ರದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ನ್ಯಾಷನಲ್ ಕಾನ್ಫರೆನ್ಸ್‌ನ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರು ನಿರಾಕರಿಸಿದ್ದರು.
ಯಶ್ವಂತ್ ಸಿನ್ಹಾರತ್ತ ಎಲ್ಲರ ಚಿತ್ತ : ಇನ್ನು ಗೋಪಾಲಕೃಷ್ಣ ಗಾಂಧಿ ಅವರು ಪ್ರಸ್ತಾವನೆಯನ್ನು ತಿರಸ್ಕರಿಸಿದ ನಂತರ, ಮಾಜಿ ಹಣಕಾಸು ಸಚಿವ ಮತ್ತು ಟಿಎಂಸಿ ನಾಯಕ ಯಶವಂತ್ ಸಿನ್ಹಾ ಅವರನ್ನು ಅಭ್ಯರ್ಥಿಯನ್ನಾಗಿ ಪರಿಗಣಿಸಲಾಗಿದೆ. ಈ ಸಭೆಗೆ ಮಮತಾ ಬ್ಯಾನರ್ಜಿ ಹಾಜರಾಗದಿದ್ದರೂ, ಜೂನ್ 21 ರಂದು ದೆಹಲಿಯಲ್ಲಿ ಶರದ್ ಪವಾರ್ ನೇತೃತ್ವದಲ್ಲಿ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಕುರಿತು ಸಭೆ ನಡೆಯಲಿದೆ. ಟಿಎಂಸಿ ಮೂಲಗಳ ಪ್ರಕಾರ, ಪಕ್ಷದ ಪರವಾಗಿ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮತ್ತೊಂದೆಡೆ ಯಶವಂತ್ ಸಿನ್ಹಾ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಮಂಡಿಸಲು ಈಗ ಸಿದ್ಧತೆ ನಡೆದಿದೆ. ಯಶವಂತ್ ಸಿನ್ಹಾ ಪ್ರಸ್ತುತ ಟಿಎಂಸಿ ಪಕ್ಷದಲ್ಲಿದ್ದು, ಅವರು ಬಿಜೆಪಿಯ ಬದ್ಧ ವಿರೋಧಿ ಎಂದು ಪರಿಗಣಿಸಲಾಗಿದೆ. ಮಮತಾ ಬ್ಯಾನರ್ಜಿ ಜೊತೆಗಿನ ಮಾತುಕತೆಯ ವೇಳೆ ಯಶವಂತ್ ಸಿನ್ಹಾ ಅವರ ಹೆಸರನ್ನು ಹಲವು ರಾಜಕೀಯ ಪಕ್ಷಗಳ ನಾಯಕರು ಒಪ್ಪಿಕೊಂಡಿದ್ದಾರೆ ಎಂದು ಟಿಎಂಸಿ ಮೂಲಗಳು ತಿಳಿಸಿವೆ. ಆದರೆ, ನಾಳೆ ನಡೆಯಲಿರುವ ವಿರೋಧ ಪಕ್ಷದ ಸಭೆಯಲ್ಲಿ ಈ ಕುರಿತ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post