ಮಂಗಳೂರು: ನಗರದ ಫಸ್ಟ್ ನ್ಯೂರೋ ಬ್ರೈನ್ ಆಂಡ್ ಸ್ಪೈನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಪಾರ್ಶ್ವವಾಯು ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ವಾಹನ ಸಂಚಾರ ಅಭಿಯಾನಕ್ಕೆ ಶಾಸಕ ವೇದವ್ಯಾಸ ಕಾಮತ್ ಸೋಮವಾರ ಚಾಲನೆ ನೀಡಿದರು.
‘ಜನರಿಗೆ ಪಾರ್ಶ್ವವಾಯು ರೋಗದ ಬಗ್ಗೆ ಮುನ್ನೆಚ್ಚರಿಕೆ ಮಾಹಿತಿ ನೀಡುವ ಜೊತೆಗೆ ತಕ್ಷಣ ಲಭ್ಯವಿರುವ ಚಿಕಿತ್ಸೆಗಳ ವಿವರಣೆ ಮತ್ತು ‘ಗೋಲ್ಡನ್ ಅವರ್’ ಬಗ್ಗೆ ಜಾಗೃತಿಯನ್ನು ಮೂಡಿಸುವ ಕಾರ್ಯ ಶ್ಲಾಘನೀಯ. ಹಲವರಿಗೆ ಪಾರ್ಶ್ವವಾಯು ರೋಗದ ಬಗ್ಗೆ ಮಾಹಿತಿ ಇರುವುದಿಲ್ಲ. ಸರಿಯಾದ ಸಂದರ್ಭದಲ್ಲಿ ಚಿಕಿತ್ಸೆ ಸಿಗದೆ ದೇಹದ ಅಂಗಾಂಗಳು ಜೀವನ ಪೂರ್ತಿ ಊನವಾಗುವ ಸಂಭವ ಹೆಚ್ಚು ಇರುತ್ತವೆ. ಕರ್ನಾಟಕ ರಾಜ್ಯದ 6 ಜಿಲ್ಲೆಗಳು ಮತ್ತು ನೆರೆಯ ಕೇರಳದ 2 ಜಿಲ್ಲೆಗಳಲ್ಲಿ ವಾಹನ ಸಂಚರಿಸಿ ಹಳ್ಳಿಗರಿಗೆ ರೋಗದ ಬಗ್ಗೆ ಜಾಗೃತಿ ಮೂಡಿಸಲಿದೆ’ ಎಂದು ವೇದವ್ಯಾಸ ಕಾಮತ್ ಹೇಳಿದರು.