ಉಳ್ಳಾಲ, ಅ.19: ಇಲ್ಲಿಗೆ ಸಮೀಪದ ಕೊಣಾಜೆ ವಿ.ವಿ ಕ್ಯಾಂಪಸ್ ಹಾಸ್ಟೆಲ್ ಬಳಿ ಬಿಜೆಪಿ ಮುಖಂಡರೊಬ್ಬರ ಮೇಲೆ ಮೂವರು ಅಪರಿಚಿತ ದುಷ್ಕರ್ಮಿಗಳು ತಲವಾರು ನಡೆಸಿದ ಘಟನೆ ಅ. 18 ರಂದು ರಾತ್ರಿ ನಡೆದಿದೆ.
ಕೊಣಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಹಾಗೂ ಕೊಣಾಜೆ ವಿವಿ ಆವರಣದ ಹಾಸ್ಟೆಲ್ ಬಳಿಯ ದುರ್ಗಾ ಫ್ಯಾನ್ಸಿ & ಜನರಲ್ ಸ್ಟೋರ್ ನ ಮಾಲಕರಾದ ಪ್ರಕಾಶ್ ಶೆಟ್ಟಿ(41) ದಾಳಿಗೆ ಒಳಗಾದ ಬಿಜೆಪಿ ಮುಖಂಡ. ಪ್ರಕಾಶ್ ಬಲ ಕೈಗೆ ತಲವಾರಿನ ಏಟು ತಗಲಿದ್ದು ಈ ಬಗ್ಗೆ ಅವರು ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ.
ಅಪಾಯವನ್ನು ಮೊದಲೇ ಊಹಿಸಿ ತಲವಾರು ದಾಳಿಯ ವೇಳೆ ಚಾಕಚಕ್ಯತೆಯಿಂದ ತಪ್ಪಿಸಿಕೊಂಡು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಕಾಶ್ ಶೆಟ್ಟಿಯವರು ಅಪಾಯದಿಂದ ಪಾರಾಗಿದ್ದಾರೆ. ಬೈಕಿನಲ್ಲಿ ಹೊಂಚು ಹಾಕಿ ಕೂತಿದ್ದ ಮೂವರು ಅಪರಿಚಿತರು ಕೃತ್ಯ ಎಸಗಿದವರು ಎಂದು ತಿಳಿದು ಬಂದಿದೆ.
ನಿನ್ನೆ ರಾತ್ರಿ 9.30 ಗಂಟೆಯ ಸುಮಾರಿಗೆ ಪ್ರಕಾಶ್ ರವರು ಅಂಗಡಿ ಬಂದ್ ಮಾಡಿ ಬೈಕ್ ನಲ್ಲಿ ಮನೆ ಕಡೆಗೆ ಹೊರಟ್ಟಿದ್ದ ವೇಳೆ ದಾಳಿ ನಡೆದಿದೆ. ಅಂಗಡಿ ಬಂದ್ ಮಾಡುವ ವೇಳೆ ಸ್ವಲ್ಪ ದೂರದಲ್ಲಿ ಕಪ್ಪು ಬಣ್ಣದ ಪಲ್ಸರ್ ಬೈಕಿನಲ್ಲಿ ಮೂವರು ಶಂಕಾಸ್ಪದವಾಗಿ ಕೂತಿರುವುದನ್ನು ಪ್ರಕಾಶ್ ಗಮನಿಸಿದ್ದಾರೆ. ಅಂಗಡಿ ಬಂದ್ ಮಾಡಿ ಪ್ರಕಾಶ್ ಅವರು ತನ್ನ ಪರಿಚಯಸ್ಥ ಮಂಜುನಾಥ್ ಎಂಬವರ ಬೈಕ್ ನಲ್ಲಿ ಮನೆ ಕಡೆಗೆ ಹೊರಟಿದ್ದಾರೆ. ಈ ವೇಳೆ ಹಿಂದಿನಿಂದ ಬೈಕ್ ನಲ್ಲಿ ಹಿಂಬಾಲಿಸಿ ಕೊಂಡು ಬಂದ ಆರೋಪಿಗಳು ಪ್ರಕಾಶ ಅವರನ್ನು ಗುರಿಯಾಗಿಸಿ ತಲವಾರು ಬೀಸಿದ್ದಾರೆ ಎಂದು ಆರೋಪಿಸಲಾಗಿದೆ.
ಅಪಾಯದ ಮುನ್ಸೂಚನೆ ಅರಿತ ಪ್ರಕಾಶ್ ಶೆಟ್ಟಿ ತಲವಾರು ಏಟನ್ನು ತಪ್ಪಿಸಲು ಯತ್ನಿಸಿದಾಗ ಇವರ ಬೈಕ್ ಉರುಳಿ ಬಿದ್ದಿದೆ. ಕೂಡಲೇ ಬೈಕ್ ಚಾಲಕ ಮತ್ತು ಪ್ರಕಾಶ್ ಹತ್ತಿರದ ಜನ ವಸತಿ ಸ್ಥಳಕ್ಕೆ ಓಡಿ ಬಚಾವಾಗಿದ್ದಾರೆ.
ಪ್ರತೀಕಾರಕ್ಕೆ ದಾಳಿ ನಡೆದಿರುವ ಶಂಕೆ:
ಕಳೆದ ವಾರ ಕೊಣಾಜೆ ಜಂಕ್ಷನ್ ನ ಕೊಣಾಜೆ ಸ್ಟೋರ್ಸ್ & ಸ್ವೀಟ್ಸ್ ಮಳಿಗೆಯ ಮಾಲಕ ಉಸ್ಮಾನ್ ಎಂಬಾತ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು ಆರೋಪಿಯ ಬಂಧನಕ್ಕೆ ಪ್ರಕಾಶ್ ಶೆಟ್ಟಿ ಒತ್ತಡ ಹೇರಿದ್ದರು ಎನ್ನಲಾಗಿದೆ. ಇದಲ್ಲದೆ ಸಮಾಜ ಘಾತುಕ ದುಷ್ಕೃತ್ಯಗಳ ವಿರುದ್ಧ ಪ್ರಕಾಶ್ ಶೆಟ್ಟಿ ಹೋರಾಟ ನಡೆಸುತ್ತಾ ಬಂದಿದ್ದರು. ಇದೇ ನೆಲೆಯಲ್ಲಿ ಪ್ರತೀಕಾರ ತೀರಿಸಲು ತಲವಾರು ದಾಳಿ ನಡೆಸಲಾಗಿದೆ ಎನ್ನಲಾಗುತ್ತಿದೆ.