ಕಡಬ: ಬೆಳ್ಳಂಬೆಳಗ್ಗೆ ಕಾಡಾನೆ ದಾಳಿಗೆ ಯುವತಿ ಸಹಿತ ಇಬ್ಬರು ಬಲಿಯಾದ ಘಟನೆ ಕಡಬ ಸಮೀಪದ ಮೀನಾಡಿ ಎಂಬಲ್ಲಿ ಇಂದು ನಡೆದಿದೆ. ಯುವತಿ ಸಹಿತ ಇಬ್ಬರು ಮೃತಪಟ್ಟಿದ್ದಾರೆ. ಇಲ್ಲಿನ ಪೇರಡ್ಕ ಹಾಲು ಸೊಸೈಟಿಯಲ್ಲಿ ಸಿಬ್ಬಂದಿಯಾಗಿರುವ ರಂಜಿತಾ ಎಂಬವರು ಮನೆಯಿಂದ ಸೊಸೈಟಿಗೆ ತೆರಳುತ್ತಿದ್ದ ವೇಳೆ ಮೀನಾಡಿ ಎಂಬಲ್ಲಿ ಆನೆ ದಾಳಿ ಮಾಡಿದೆ. ಸ್ಥಳದಲ್ಲಿ ಆಕ್ರೋಶಿತ ಸಾರ್ವಜನಿಕರು ಗಲಾಟೆ ಮಾಡಿದ್ದು ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ.

ಮೃತರನ್ನು ರಂಜಿತಾ(21) ಹಾಗೂ ರಮೇಶ್ ರೈ(55) ಎಂದು ಗುರುತಿಸಲಾಗಿದೆ. ರಂಜಿತಾ ಪೇರಡ್ಕ ಹಾಲು ಸೊಸೈಟಿಯಲ್ಲಿ ಸಿಬ್ಬಂದಿಯಾಗಿದ್ದು, ಇಂದು ಬೆಳಗ್ಗೆ ಎಂದಿನಂತೆ ಮನೆಯಿಂದ ಸೊಸೈಟಿಗೆ ಹೋಗುತ್ತಿದ್ದ ವೇಳೆ ಕರ್ಮೇಣ ಎಂಬಲ್ಲಿ ಅವರ ಮೇಲೆ ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ಅವರ ಬೊಬ್ಬೆ ಕೇಳಿ ಅಲ್ಲೇ ಪಕ್ಕದಲ್ಲಿದ್ದ ಸ್ಥಳೀಯ ನಿವಾಸಿ ರಮೇಶ್ ರೈ ಅವರು ರಂಜಿತಾರನ್ನು ರಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ಅವರ ಮೇಲೂ ಆನೆ ದಾಳಿ ನಡೆಸಿದೆ. ಹೊಟ್ಟೆ ಭಾಗಕ್ಕೆ ತಿವಿತಕ್ಕೊಳಗಾದ ರಮೇಶ್ ರೈ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಗಂಭೀರವಾಗಿ ಗಾಯಗೊಂಡಿದ್ದ ರಂಜಿತಾರನ್ನು ನೆಲ್ಯಾಡಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಪರಿಸರದಲ್ಲಿ ಅನೇಕ ತಿಂಗಳುಗಳಿಂದ ಕಾಡಾನೆಗಳು ಕಾಣಿಸಿಕೊಳ್ಳುತ್ತಿವೆ. ಆದರೆ ಮನುಷ್ಯರ ಮೇಲೆ ದಾಳಿ ನಡೆಸಿದ್ದು ಇದೇ ಮೊದಲು ಎಂದು ಸ್ಥಳೀಯರು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.








Discussion about this post