ಸುಳ್ಯ : ಅರಣ್ಯದಂಚಿನ ಕೃಷಿ ಪ್ರದೇಶಗಳನ್ನು ಕಾಡಾನೆ ಹಾವಳಿಯಿಂದ ರಕ್ಷಿಸಲು ಅರಣ್ಯ ಇಲಾಖೆ ನಾನಾ ಕ್ರಮಗಳನ್ನು ಕೈಗೊಂಡರೂ, ಪೂರ್ತಿ ಫಲ ನೀಡದ ಕಾರಣ ಇದೀಗ ಮತ್ತೊಂದು ವಿಧಾನಕ್ಕೆ ಮೊರೆ ಹೋಗಿದೆ. ಆಯಕಟ್ಟಿನ ಪ್ರದೇಶದಲ್ಲಿ ಕಾಂಕ್ರೀಟ್ ತಡೆ ಬೇಲಿ ನಿರ್ಮಿಸಲು ಮುಂದಾಗಿದೆ.
ಕೊಡಗು ಹಾಗೂ ಕಾಸರಗೋಡು ಜಿಲ್ಲೆಯ ಗಡಿ ಭಾಗದಲ್ಲಿ ಬರುವ ಸುಳ್ಯ ತಾಲೂಕಿನ ಅರಣ್ಯಗಳಲ್ಲಿರುವ ಆನೆಗಳು ಆಗಾಗ ಕೃಷಿ ತೋಟಗಳಿಗೆ ಲಗ್ಗೆ ಇಡುತ್ತಿದ್ದು, ಅಪಾರ ಪ್ರಮಾಣದಲ್ಲಿ ಕೃಷಿ ಹಾನಿ ಮಾಡುತ್ತಲೇ ಇವೆ. ಆನೆಗಳು ಬಂದಾಗಲೆಲ್ಲಾ ಅರಣ್ಯ ಇಲಾಖೆಗೆ ದೂರು ನೀಡುವುದು, ಅವರು ಆನೆಗಳನ್ನು ಓಡಿಸುವುದು, ಕೆಲವೇ ದಿನಗಳಲ್ಲಿ ಮತ್ತೆ ಲಗ್ಗೆ ಇಡುವುದು ಮಾಮೂಲಿಯಾಗಿದೆ. ಕೊಡಗು ಜಿಲ್ಲೆಯ ಗಡಿ ಭಾಗ ಸಂಪಾಜೆ, ಕೇರಳ ಗಡಿಭಾಗ ಮಂಡೆಕೋಲು ಅರಣ್ಯ ಪ್ರದೇಶದಿಂದ ಆನೆಗಳು ಆಗಾಗ ತೋಟಗಳಿಗೆ ನುಗ್ಗುತ್ತಿವೆ.
ಇತ್ತೀಚಿನ ದಿನಗಳಲ್ಲಿ ಫಲ ಕೊಡುತ್ತಿಲ್ಲ ಎಂಬ ದೂರುಗಳಿವೆ. ನೀರಿನ ಹರಿವು ಇರುವಲ್ಲಿ ಕಂದಕ ನಿರ್ಮಿಸಲು ಸಾಧ್ಯವಾಗುತ್ತಿಲ್ಲ. ಆನೆಗಳು ಇಂತಹ ಪ್ರದೇಶಗಳನ್ನೇ ಆರಿಸಿಕೊಂಡು ಅಲ್ಲಿಂದ ನುಗ್ಗುತ್ತಿವೆ. ಅನೇಕ ಕಡೆ ಕಂದಕಗಳು ಮಳೆಯಿಂದಾಗಿ ಕುಸಿದು ಆನೆಗಳಿಗೆ ಹತ್ತಿಳಿಯಲು ಅನುಕೂಲವಾಗಿದೆ. ಹೀಗಾಗಿ ಇದು ಕೂಡ ಫಲ ನೀಡುತ್ತಿಲ್ಲ.
ಕಾಂಕ್ರೀಟ್ ತಡೆಗೋಡೆ:
ಸುಳ್ಯ ವಲಯ ಅರಣ್ಯ ವ್ಯಾಪ್ತಿಯ ಸಂಪಾಜೆ ಮತ್ತು ಮಂಡೆಕೋಲು ಗ್ರಾಮಗಳಲ್ಲಿ ಕಾಂಕ್ರೀಟ್ ತಡೆ ಬೇಲಿ ಕಾಮಗಾರಿ ನಡೆಯುತ್ತಿದೆ. ಸಂಪಾಜೆ ಗ್ರಾಮದ ಗೂನಡ್ಕ ಬಳಿ ಕುಯಿಂತೋಡು ಕೆ. ಪಿ. ಜಗದೀಶ್ ಅವರ ತೋಟ ಕಾಡಾನೆ ದಾಳಿಗೆ ಸಿಲುಕಿ ನಲುಗಿ ಹೋಗಿದೆ. ಅಲ್ಲಿ ಅರಣ್ಯ ಇಲಾಖೆ 40 ಮೀ. ಉದ್ದಕ್ಕೆ ಕಾಂಕ್ರೀಟ್ ತಡೆ ಬೇಲಿ ನಿರ್ಮಿಸಿದೆ. ಮಂಡೆಕೋಲು ಗ್ರಾಮದ ಪುಂಡರೀಕ ಗೌಡರ ತೋಟದ ಪ್ರದೇಶದಲ್ಲೂ 40 ಮೀ. ಉದ್ದದ ಕಾಂಕ್ರೀಟ್ ಬೇಲಿ ನಿರ್ಮಿಸಲಾಗುತ್ತಿದೆ. ಎರಡೂ ಕಾಮಗಾರಿಗಳಿಗೆ ಸುಮಾರು 15 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ.
ಸಿಮೆಂಟ್, ಕಬ್ಬಿಣದ ಬೀಮ್‌ಗಳನ್ನು ತಯಾರಿಸಿ, 80 ಸೆಂ. ಮೀ. ಅಥವಾ 1 ಮೀ. ಅಂತರದಲ್ಲಿ 2 ಮೀ. ಎತ್ತರಕ್ಕೆ ಕಂಬ ಹಾಕಲಾಗುತ್ತದೆ. ನಂತರ ಅವುಗಳಿಗೆ ಕಬ್ಬಿಣದ ಮುಳ್ಳುಗಳನ್ನು ಜೋಡಿಸಲಾಗುತ್ತದೆ. ಕಂಬಗಳ ನಡುವೆ ಅವಕಾಶ ಕಿರಿದಾಗಿರುವುದರಿಂದ ಆನೆಗಳಿಗೆ ಇದನ್ನು ದಾಟಿ ಒಳ ಬರುವುದಕ್ಕೆ ಸಾಧ್ಯವಾಗುವುದಿಲ್ಲ.
‘ಕಾಡಾನೆ ದಾಳಿ ತಡೆಗಟ್ಟಲು ಅನುದಾನದ ಲಭ್ಯತೆ ಆಧಾರದಲ್ಲಿ ವಿಶೇಷ ತಡೆ ಮತ್ತು ಆನೆ ಕಂದಕ ನಿರ್ಮಿಸಲಾಗಿದೆ. ಆದರೆ ಇತರ ಕಡೆ ಕಾಡಾನೆಗಳು ದಾಳಿ ಮಾಡುತ್ತಿವೆ. ಸುಳ್ಯ ಅರಣ್ಯ ವಲಯ ವ್ಯಾಪ್ತಿಯಲ್ಲಿ ಈಗಾಗಲೇ 30 ಕಿ. ಮೀ. ದೂರ ಆನೆ ಕಂದಕ ನಿರ್ಮಿಸಲಾಗಿದೆ. 480 ಮೀ. ಸ್ಪೆಷಲ್ ಸ್ಟ್ರಕ್ಚರ್ (ವಿಶೇಷ ತಡೆ) ಮಾಡಲಾಗಿದೆ. ದಾಳಿ ಮಾಡುವ ಕಾಡಾನೆಗಳನ್ನು ಇಲಾಖೆಯ ಸಿಬ್ಬಂದಿ ಕಾಡಿಗಟ್ಟುವ ಕೆಲಸ ನಿರಂತರ ಮಾಡುತ್ತಿದ್ದಾರೆ. ಸುಳ್ಯ ವಲಯದಲ್ಲಿ ಒಂದೂವರೆ ಸಾವಿರ ಮೀಟರ್ ಉದ್ದದ ಕಾಂಕ್ರೀಟ್ ತಡೆಬೇಲಿ ಅಗತ್ಯವಿದೆ’ ಎಂದು ಸುಳ್ಯದ ವಲಯ ಅರಣ್ಯ ಅಧಿಕಾರಿ ಗಿರೀಶ್ ತಿಳಿಸಿದ್ದಾರೆ.