ನವದೆಹಲಿ: 105 ವರ್ಷ ವಯಸ್ಸಿನ ರಸಿಕ್ ಚಂದ್ರ ಮಂಡಲ್ಗೆ ಕೊನೆಗೂ ಸೆರೆ ವಾಸದಿಂದ ಮುಕ್ತಿ ದೊರೆತಿದೆ. ದಶಕಗಳಷ್ಟು ಹಳೆಯ ಕೊಲೆ ಪ್ರಕರಣವನ್ನು ಸುಪ್ರೀಂಕೋರ್ಟ್ ಶುಕ್ರವಾರ ಮುಕ್ತಾಯಗೊಳಿಸಿದೆ. ಈ ಮೂಲಕ 1988ರಲ್ಲಿ ಆರಂಭವಾಗಿದ್ದ ಮಂಡಲ್ ಅವರ ಸುದೀರ್ಘ ಕಾನೂನು ಹೋರಾಟ ಅಂತ್ಯಗೊಂಡಿದೆ.
ಪಶ್ಚಿಮ ಬಂಗಾಳದ ಮಾಲ್ದಾ ಜಿಲ್ಲೆಯವರಾದ ಮಂಡಲ್ 1920ರಲ್ಲಿ ಜನಿಸಿದ್ದರು. 1988ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ 1994ರಲ್ಲಿ ಅವರಿಗೆ ಶಿಕ್ಷೆ ವಿಧಿಸಲಾಗಿತ್ತು. ಆಗ ಅವರಿಗೆ 68 ವರ್ಷ ವಯಸ್ಸಾಗಿತ್ತು. ಜೀವಾವಧಿ ಶಿಕ್ಷೆ ಅನುಭವಿಸುತ್ತಾ ಜೈಲಿನಲ್ಲಿದ್ದರು. 2024ರ ನವೆಂಬರ್ 29ರಂದು ಸುಪ್ರೀಂ ಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡುವವರೆಗೆ ಅವರು ಜೈಲಿನಲ್ಲೇ ಇದ್ದರು.
ಶುಕ್ರವಾರ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠದ ಮುಂದೆ ಪ್ರಕರಣ ಅವರ ಅರ್ಜಿ ವಿಚಾರಣೆಗೆ ಬಂದಿತ್ತು. ಮಂಡಲ್ ಅವರ ವಯಸ್ಸನ್ನು ಪರಿಗಣಿಸಿದ ನ್ಯಾಯಪೀಠ, ಪ್ರಕರಣವನ್ನು ಮುಕ್ತಾಯಗೊಳಿಸುವುದಾಗಿ ಹಾಗೂ ಇನ್ನೂ ಯಾವುದೇ ಶಿಕ್ಷೆ ಬಾಕಿ ಇದ್ದರೆ ಅದನ್ನು ಮನ್ನಾ ಮಾಡುವುದಾಗಿ ತಿಳಿಸಿತು.
ಅವರ ಜೀವಾವಧಿ ಶಿಕ್ಷೆ ತಾಂತ್ರಿಕವಾಗಿ ಪೂರ್ಣಗೊಂಡಿರದಿದ್ದರೂ, ಇನ್ನು ಮುಂದೆ ಅವರನ್ನು ಜೈಲಿಗೆ ಕಳುಹಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತು. 2024ರಲ್ಲಿ ನೀಡಿದ್ದ ಮಧ್ಯಂತರ ಜಾಮೀನು ಆದೇಶವನ್ನು ಈಗ ಅಂತಿಮಗೊಳಿಸುತ್ತಿರುವುದಾಗಿ ಪೀಠ ಹೇಳಿತು.
2024ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದಲ್ಲಿ, “ಪ್ರಸ್ತುತ ರಿಟ್ ಅರ್ಜಿಯ ವಿಚಾರಣೆ ಬಾಕಿ ಇರುವ ಅವಧಿಯಲ್ಲಿ ಅರ್ಜಿದಾರ ರಸಿಕ್ ಚಂದ್ರ ಮಂಡಲ್ ಅವರನ್ನು ಮಧ್ಯಂತರ ಜಾಮೀನು/ಪೆರೋಲ್ ಮೇಲೆ ಬಿಡುಗಡೆ ಮಾಡಬೇಕು. ಇದರ ನಿಯಮಗಳು ಮತ್ತು ಷರತ್ತುಗಳನ್ನು ವಿಚಾರಣಾ ನ್ಯಾಯಾಲಯ ನಿಗದಿಪಡಿಸಬೇಕು” ಎಂದು ಹೇಳಿತ್ತು.
ಆ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ಪರ ವಕೀಲರು, ಮಂಡಲ್ ಅವರಿಗೆ ವಯೋಸಹಜ ಆರೋಗ್ಯ ಸಮಸ್ಯೆಗಳಿವೆ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದರು. ಆದರೆ, ಅವರ ಆರೋಗ್ಯ ಸ್ಥಿರವಾಗಿದೆ. ಮಂಡಲ್ ಅವರು ಶೀಘ್ರದಲ್ಲೇ 104ನೇ ಹುಟ್ಟುಹಬ್ಬ ಆಚರಿಸಲಿದ್ದಾರೆ ಎಂದು ಸರ್ಕಾರದ ಪರ ವಕೀಲರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ಮಂಡಲ್ ಅವರ ವಯಸ್ಸನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ಅವರಿಗೆ ಮಧ್ಯಂತರ ಜಾಮೀನು ನೀಡಲು ನಿರ್ಧರಿಸಿತ್ತು.
1988ರ ಕೊಲೆ ಪ್ರಕರಣದಲ್ಲಿ 1994ರಲ್ಲಿ 68ನೇ ವಯಸ್ಸಿನಲ್ಲಿ ಮಂಡಲ್ ಅವರು ದೋಷಿ ಎಂದು ಸಾಬೀತಾಗಿತ್ತು. ಬಳಿಕ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ತಮ್ಮ ಶಿಕ್ಷೆ ಮತ್ತು ದೋಷಾರೋಪಣೆಯನ್ನು ಪ್ರಶ್ನಿಸಿ ಅವರು ಸಲ್ಲಿಸಿದ್ದ ಮೇಲ್ಮನವಿಯನ್ನು 2018ರಲ್ಲಿ ಕೋಲ್ಕತ್ತಾ ಹೈಕೋರ್ಟ್ ವಜಾಗೊಳಿಸಿತ್ತು. ಇದಾದ ಬಳಿಕ ಅವರು ಸುಪ್ರೀಂ ಕೋರ್ಟ್‌ನ ಮೊರೆ ಹೋದರೂ ಅಲ್ಲಿ ಕೂಡ ಅವರಿಗೆ ತಕ್ಷಣದ ಪರಿಹಾರ ದೊರೆತಿರಲಿಲ್ಲ.
2020ರಲ್ಲಿ 99ನೇ ವಯಸ್ಸಿನಲ್ಲಿದ್ದ ಮಂಡಲ್ ಅವರು ತಮ್ಮನ್ನು ಅವಧಿಗೆ ಮುನ್ನವೇ ಬಿಡುಗಡೆ ಮಾಡಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ತಮ್ಮ ವಯಸ್ಸು ಮತ್ತು ವಯೋಸಹಜ ಆರೋಗ್ಯ ಸಮಸ್ಯೆಗಳನ್ನು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
2021ರ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಈ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡಿತ್ತು. ಹಲವು ವರ್ಷಗಳ ಕಾನೂನು ಪ್ರಕ್ರಿಯೆಯ ಬಳಿಕ, ಇದೀಗ 105ನೇ ವಯಸ್ಸಿನಲ್ಲಿ ಮಂಡಲ್ ಅವರ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮುಕ್ತಾಯಗೊಳಿಸಿದೆ.
Discover more from Coastal Times Kannada
Subscribe to get the latest posts sent to your email.








Discussion about this post