ಮಂಗಳೂರು, ನ.20: ಮೊನ್ನೆಯಷ್ಟೇ ಕೊನೆಗೊಂಡ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತವನ್ನು ಸೋಲಿಸಿದ ಆಸ್ಟ್ರೇಲಿಯಾ ತಂಡ ವಿಶ್ವಕಪ್ ತನ್ನದಾಗಿಸಿಕೊಂಡಿದೆ. ಆ ಚಾಂಪಿಯನ್ಸ್ ತಂಡದ ಹಿಂದೆ ಕರಾವಳಿಯ ಮಹಿಳೆಯೊಬ್ಬರು ಇರುವುದು ತಡವಾಗಿ ಬೆಳಕಿಗೆ ಬಂದಿದೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿದ್ದವರು ನಮ್ಮ ಕರಾವಳಿ ಮೂಲದ ಕುವರಿ ಅಂದರೆ ಹೆಚ್ಚಿನ ಜನ ನಂಬಲಿಕ್ಕಿಲ್ಲ. ಮಂಗಳೂರಿನ ಕಿನ್ನಿಗೋಳಿ ಮೂಲದ ಊರ್ಮಿಳಾ ರೊಸಾರಿಯೋ ಎಂಬ ಯುವತಿ ಕ್ರಿಕೆಟ್ ಆಸ್ಟೇಲಿಯಾ ತಂಡದ ಮ್ಯಾನೇಜರ್ ಆಗಿದ್ದು ಭಾರತ ವಿರುದ್ಧ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಯಾರೀಕೆ ಊರ್ಮಿಳಾ?: ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ಬಳಿಯ ಕಿನ್ನಿಗೋಳಿಯ ವೆಲಂಟೈನ್ ರೊಸೆರಿಯೊ ಮತ್ತು ಇವಿ ಅವರ ಪುತ್ರಿಯೇ ಊರ್ಮಿಳಾ ರೊಸೆರಿಯೊ. ಈ ದಂಪತಿ ದೋಹಾ ಕತಾರ್ನಲ್ಲಿ ಕೆಲಸ ಮಾಡುತ್ತಿದ್ದಾಗ ಅಲ್ಲಿಯೇ ಜನಿಸಿದ್ದ ಊರ್ಮಿಳಾಗೆ ಈಗ 34 ವರ್ಷ. ಈಕೆಯ ತಂದೆ-ತಾಯಿ ಏಳು ವರ್ಷಗಳ ಹಿಂದೆ ಭಾರತಕ್ಕೆ ಮರಳಿದ್ದು, ಸಕಲೇಶಪುರದಲ್ಲಿ ಕಾಫಿ ಎಸ್ಟೇಟ್ ಖರೀದಿಸಿ ನೆಲೆಸಿದ್ದಾರೆ.
ಈ ಮಧ್ಯೆ ಕಾರ್ನೆಜಿ ಮೆಲನ್ ಯುನಿವರ್ಸಿಟಿಯಲ್ಲಿ ಬಿಬಿಎ ಪದವಿ ಪಡೆದಿರುವ ಊರ್ಮಿಳಾ ಆಸ್ಟ್ರೇಲಿಯಾಗೆ ತೆರಳಿದ್ದರು. ಇದಕ್ಕೂ ಮುನ್ನ ಕ್ರೀಡೆಯಲ್ಲಿ ತೊಡಗಿಸಿಕೊಂಡಿದ್ದ ಊರ್ಮಿಳಾ, ಮೂರು ವರ್ಷಗಳ ಕಾಲ ಕತಾರ್ ಟೆನಿಸ್ ಫೆಡರೇಷನ್ನಲ್ಲೂ ಕೆಲಸ ಮಾಡಿದ್ದರು. ಆಸ್ಟ್ರೇಲಿಯಾಗೆ ತೆರಳಿದ ಬಳಿಕ ಮೊದಲಿಗೆ ಮೂರು ವರ್ಷ ಅಡಿಲೇಡ್ ಕ್ರಿಕೆಟ್ ಟೀಮ್ ಜತೆ ಕೆಲಸ ಮಾಡಿದ್ದರು. ನಂತರ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ಮ್ಯಾನೇಜರ್ ಆದರು.
ನಂತರ ಕಳೆದ ಫುಟ್ಬಾಲ್ ವಿಶ್ವಕಪ್ ಸಂದರ್ಭದಲ್ಲಿ ಕ್ರಿಕೆಟ್ನಿಂದ ಬಿಡುವು ಪಡೆದ ಊರ್ಮಿಳಾ ಕತಾರ್ನಲ್ಲಿ ನಾಲ್ಕು ತಿಂಗಳ ಕಾಲ ಫುಟ್ಬಾಲ್ ಕ್ರೀಡಾಂಗಣದ ನಿರ್ವಹಣೆ ಜವಾಬ್ದಾರಿ ನಿಭಾಯಿಸಿದ್ದರು. ಇದೇ ಸೆಪ್ಟೆಂಬರ್ನಲ್ಲಿ ಮತ್ತೆ ಆಸ್ಟ್ರೇಲಿಯಾಗೆ ವಾಪಸ್ ಆದ ಈಕೆಗೆ ಆಸ್ಟ್ರೇಲಿಯಾದ ಪುರುಷರ ಕ್ರಿಕೆಟ್ ತಂಡವನ್ನು ನಿರ್ವಹಣೆ ಮಾಡುವ ಅವಕಾಶ ಸಿಕ್ಕಿತ್ತು.
ಊರ್ಮಿಳಾ ವಿಶ್ವಕಪ್ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಪುರುಷರ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿದ್ದು, ಅದು ಮುಗಿದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡಕ್ಕೆ ಮರಳಲಿದ್ದು, ಈ ತಂಡ ಡಿಸೆಂಬರ್ನಲ್ಲಿ ಭಾರತಕ್ಕೆ ಬರುವಾಗ ಜೊತೆಯಾಗಲಿದ್ದಾರೆ ಎಂಬುದಾಗಿ ಈಕೆಯ ತಂದೆ ಮಾಹಿತಿ ನೀಡಿದ್ದಾರೆ. ಅಂದಹಾಗೆ ಈಕೆ ಕ್ರಿಕೆಟ್ ಜಗತ್ತಿಗೆ ಪ್ರವೇಶಿಸಿದ್ದೇ ಅಚ್ಚರಿ. ವಿದ್ಯಾರ್ಥಿನಿ ಆಗಿದ್ದಾಗ ಅವಳು ಬಾಸ್ಕೆಟ್ಬಾಲ್, ಟೆನಿಸ್, ರೋಯಿಂಗ್, ಬಂಗಿ ಜಂಪಿಂಗ್ನಲ್ಲಿ ತೊಡಗಿಸಿಕೊಂಡಿದ್ದಳು. ಆದರೆ ನಂತರ ಹೀಗೆ ಕ್ರಿಕೆಟ್ನಲ್ಲಿ ತೊಡಗಿಸಿಕೊಳ್ಳುತ್ತಾಳೆ ಎಂಬ ಯೋಚನೆಯೇ ಇರಲಿಲ್ಲ ಎನ್ನುತ್ತಾರೆ ಊರ್ಮಿಳಾ ಅವರ ತಂದೆ ವೆಲಂಟೈನ್.
Discover more from Coastal Times Kannada
Subscribe to get the latest posts sent to your email.
Discussion about this post