ಮಂಗಳೂರು: ಬಹುದಿನಗಳ ಬೇಡಿಕೆಯಾಗಿದ್ದ ಸುರಂಗ ಹೊಂದಿರುವ ಪಡೀಲ್–ಕುಲಶೇಖರ ನಡುವಿನ ರೈಲ್ವೆ ದ್ವಿಪಥ ಮಾರ್ಗ ಸೋಮವಾರದಿಂದ ರೈಲುಗಳ ಸಂಚಾರಕ್ಕೆ ಮುಕ್ತವಾಗಿದೆ.
ಬೆಳಿಗ್ಗೆ 3.34ಕ್ಕೆ ನಿಜಾಮುದ್ದೀನ್–ಎರ್ನಾಕುಲಂ ಜಂಕ್ಷನ್ (ರೈ.ಸಂ. 12618) ಮಂಗಲ ಲಕ್ಷದ್ವೀಪ್ ಎಕ್ಸ್‌ಪ್ರೆಸ್ ರೈಲು ಈ ಮಾರ್ಗದ ಮೂಲಕ ಸಂಚರಿಸಿತು. ಇದೇ ವೇಳೆ ಎರ್ನಾಕುಲಂ ಜಂಕ್ಷನ್– ನಿಜಾಮುದ್ದೀನ್ (ರೈ.ಸಂ. 12617) ಮಂಗಲ ಲಕ್ಷದ್ವೀಪ ಎಕ್ಸ್‌ಪ್ರೆಸ್ ರೈಲು ಬೆಳಿಗ್ಗೆ 3.41 ಕ್ಕೆ ಈ ಮಾರ್ಗದಲ್ಲಿ ಸಂಚಾರ ನಡೆಸಿತು.
ಈ ಮಾರ್ಗದಲ್ಲಿ ಸಿವಿಲ್ ಕಾಮಗಾರಿ ಪೂರ್ಣಗೊಂಡಿದ್ದು, ಮಾ.17 ರಿಂದ 19 ರವರೆಗೆ ಅಂತಿಮ ಹಂತದ ಕಾಮಗಾರಿಗಳಾದ ಸಿಗ್ನಲ್ ಇಂಟರ್‌ಲಾಕಿಂಗ್, ಸಂಪರ್ಕ ಕಾಮಗಾರಿಗಳನ್ನು ಕೈಗೊಳ್ಳಲಾಗಿತ್ತು. ನಸುಕಿನ ಜಾವ 2 ಗಂಟೆಗೆ ವಿದ್ಯುದೀಕರಣಗೊಂಡ ಈ ಮಾರ್ಗದಲ್ಲಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು. ಜೋಕಟ್ಟೆ–ಪಡೀಲ್ ನಡುವಿನ ಮಾರ್ಗ ದ್ವಿಪಥ ಪೂರ್ಣವಾಗಿದ್ದು, ತಾತ್ಕಾಲಿಕ ಕುಲಶೇಖರ ನಿಲ್ದಾಣವನ್ನು ತೆರವುಗೊಳಿಸಲಾಯಿತು.
ರೈಲು ಸಂಚಾರಕ್ಕೆ ಅನುಕೂಲ:780 ಮೀಟರ್ ಸುರಂಗ ಹೊಂದಿರುವ ಪಡೀಲ್–ಕುಲಶೇಖರ ನಡುವಿನ 2.26 ಕಿ.ಮೀ. ದ್ವಿಪಥ ರೈಲು ಮಾರ್ಗ ಕಾಮಗಾರಿ ಇದೀಗ ಪೂರ್ಣವಾಗಿದೆ. ಇದರೊಂದಿಗೆ 19 ಕಿ.ಮೀ. ಉದ್ದದ ಮಂಗಳೂರು ಜಂಕ್ಷನ್–ಪಣಂಬೂರು ನಡುವಿನ ಮಾರ್ಗ ದ್ವಿಪಥ ಆದಂತಾಗಿದೆ.
ಇದುವರೆಗೆ ಪಡೀಲ್–ಕುಲಶೇಖರ ನಡುವಿನ 2.26 ಕಿ.ಮೀ. ರೈಲು ಮಾರ್ಗದಲ್ಲಿ ಏಕಮುಖ ಸಂಚಾರ ಮಾತ್ರ ಸಾಧ್ಯವಾಗಿತ್ತು. ಇದರಿಂದ ರೈಲುಗಳ ಸುಗಮ ಸಂಚಾರಕ್ಕೆ ಅಡಚಣೆ ಆಗುತ್ತಿತ್ತು. ಹೀಗಾಗಿ ಕೆಲ ರೈಲುಗಳನ್ನು ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗುತ್ತಿತ್ತು.
ಕುಲಶೇಖರದಲ್ಲಿ ನಿರ್ಮಿಸಿರುವ 4ಬಿ ಸುರಂಗ ಮಾರ್ಗವು ದಕ್ಷಿಣ ರೈಲ್ವೆಯ ಪಾಲ್ಘಾಟ್ ವಿಭಾಗದ ನಾಲ್ಕನೇ ಸುರಂಗವಾಗಿದೆ. 780 ಮೀಟರ್ ಉದ್ದವಿದ್ದು, 6.18 ಮೀಟರ್ ಅಗಲವಾಗಿರುವ ಸುರಂಗ, 6.8 ಮೀಟರ್ ಎತ್ತರವಾಗಿದೆ. ಸುಮಾರು ₹70 ಕೋಟಿ ವೆಚ್ಚದಲ್ಲಿ ಈ ಸುರಂಗ ನಿರ್ಮಾಣ ಮಾಡಲಾಗಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.
ಒಂದೇ ಮಾರ್ಗ ಇದುದ್ದರಿಂದ ಸರಕು ಸಾಗಣೆ ರೈಲುಗಳನ್ನೂ ಜೋಕಟ್ಟೆ ನಿಲ್ದಾಣದಲ್ಲಿ ಅಥವಾ ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ ನಿಲುಗಡೆ ಮಾಡಬೇಕಾಗಿತ್ತು. ಈ ಮಾರ್ಗದ ದ್ವಿಪಥ ಕಾಮಗಾರಿ ಪೂರ್ಣವಾಗಿದ್ದರಿಂದ ಮಂಗಳೂರು ಜಂಕ್ಷನ್–ಜೋಕಟ್ಟೆ–ಪಣಂಬೂರು ನಡುವಿನ ರೈಲುಗಳ ಸುಗಮ ಸಂಚಾರಕ್ಕೆ ಅನುಕೂಲವಾಗಿದೆ ಎಂದು ದಕ್ಷಿಣ ರೈಲ್ವೆ ತಿಳಿಸಿದೆ.