ಮಂಗಳೂರು: ಮಹಾನಗರ ಪಾಲಿಕೆ ಹಾಗೂ ಭಾರತೀಯ ಅಂಚೆ ಇಲಾಖೆಗಳ ಸಹಯೋಗದಲ್ಲಿ ಜನನ ಮತ್ತು ಮರಣ ಪ್ರಮಾಣಪತ್ರಗಳನ್ನು ಮನೆ ಬಾಗಿಲಿಗೆ ತಲುಪಿಸುವ ಯೋಜನೆಯನ್ನು ನಗರದಲ್ಲಿ ಆರಂಭೀಸಲಾಗಿದೆ. ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಸೋಮವಾರ ಮಂಗಳೂರು ವಿಭಾಗದ ಅಂಚೆ ಅಧೀಕ್ಷಕ ಶ್ರೀಹರ್ಷ ಹಾಗೂ ಮೇಯರ್ ಪ್ರೇಮಾನಂದ ಶೆಟ್ಟಿ ಅವರು ಒಪ್ಪಂದಕ್ಕೆ ಸಹಿ ಹಾಕಿದರು.
ಇ–ಜನ್ಮ ಪೋರ್ಟಲ್‌ನಲ್ಲಿ ಜನನ ಅಥವಾ ಮರಣ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸುವ ನಾಗರಿಕರು, ಪಾಲಿಕೆಯ ಕಚೇರಿಗೆ ಅಲೆದಾಡಬೇಕಿಲ್ಲ. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿಯೇ ಮನೆ ಬಾಗಿಲಿಗೆ ಪ್ರಮಾಣಪತ್ರ ಕಳುಹಿಸುವ ಬಗ್ಗೆ ನಿಗದಿತ ಅರ್ಜಿ ಭರ್ತಿ ಮಾಡಿ ಕೊಡಬೇಕು ಎಂದರು.
ಸಾಮಾನ್ಯವಾಗಿ ಅರ್ಜಿ ಸಲ್ಲಿಸಿದ 30 ದಿನಗಳ ನಂತರ ಈ ಪ್ರಮಾಣಪತ್ರಗಳನ್ನು ಸಿದ್ಧಪಡಿಸಲಾಗುತ್ತಿದೆ. ಅಂಚೆ ಇಲಾಖೆಯು ಪಾಲಿಕೆಯಿಂದ ಈ ಪ್ರಮಾಣಪತ್ರಗಳನ್ನು ಸಂಗ್ರಹಿಸಲಿದ್ದು, ಅರ್ಜಿದಾರರ ಮನೆಗೆ 5 ದಿನದಲ್ಲಿ ತಲುಪಿಸಲು ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ಪ್ರತ್ಯೇಕ ವಿನ್ಯಾಸಗೊಳಿಸಿದ ಅಂಚೆ ಕವರ್‌ಗಳನ್ನು ಸಿದ್ಧಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸೇವೆಯನ್ನು www.indiapost.gov.in. ವೆಬ್‌ಸೈಟ್ ಮೂಲಕ ಕಾಲಕಾಲಕ್ಕೆ ಪರಿಶೀಲಿಸಬಹುದಾಗಿದೆ. ಜೊತೆಗೆ ಅಂಚೆ ಇಲಾಖೆಯಿಂದ ಕಾಲಕಾಲಕ್ಕೆ ಎಸ್‌ಎಂಎಸ್ ಕಳುಹಿಸಲಾಗುತ್ತಿದೆ ಎಂದ ಅವರು, ಸದ್ಯಕ್ಕೆ ಈ ಸೇವೆಯು ಹರಿಯಾಣದ ಅಂಬಾಲ ಹಾಗೂ ಜಮ್ಮು ಅಂಚೆ ಕಚೇರಿಗಳಲ್ಲಿ ಲಭ್ಯವಾಗಿದೆ ಎಂದರು.
ಈ ಯೋಜನೆಯಿಂದ ಅರ್ಜಿದಾರರ ಸಮಯ ಉಳಿತಾಯ ಆಗಲಿದೆ. ರಾಜ್ಯ ಹಾಗೂ ದೇಶದ ಬೇರೆ ಭಾಗಗಳಲ್ಲಿ ಇರುವವರಿಗೆ ಇದರಿಂದ ಅನುಕೂಲ ಆಗಲಿದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಅಭಿಪ್ರಾಯಪಟ್ಟರು. ನಿತ್ಯ ಮಹಾನಗರ ಪಾಲಿಕೆಯಲ್ಲಿ ಜನನ ಪ್ರಮಾಣಪತ್ರಕ್ಕೆ 100 ಹಾಗೂ ಮರಣ ಪ್ರಮಾಣಪತ್ರಕ್ಕೆ 60 ಅರ್ಜಿಗಳು ಸಲ್ಲಿಕೆಯಾಗುತ್ತಿವೆ ಎಂದರು.
ಈ ಸಂದರ್ಭದಲ್ಲಿ ಉಪ ಮೇಯರ್ ಸುಮಂಗಲಾ ರಾವ್, ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಇದ್ದರು.