ಉಳ್ಳಾಲ, ಸೆ.22: ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜ್ವರಕ್ಕೆ ಚಿಕಿತ್ಸೆಗೆಂದು ತೆರಳಿದ್ದ ತಾಯಿ, ಮಗಳಿಗೆ ಶಿಲೀಂದ್ರ ಲೇಪಿತ ಮಾತ್ರೆಗಳನ್ನು ನೀಡಿದ ಘಟನೆ ನಡೆದಿದ್ದು, ದೂರಿಗೆ ಸ್ಪಂದಿಸಿದ ಜಿಲ್ಲಾ ಆರೋಗ್ಯಾಧಿಕಾರಿ ತಕ್ಷಣ ಅಲ್ಲಿಗೆ ನೀಡಿರುವ ಪ್ಯಾರಾ ಸಿಟಮಾಲ್ ಮಾತ್ರೆಗಳನ್ನ ಹಿಂಪಡೆದಿದ್ದಾರೆ.
ಕೆ.ಸಿ.ನಗರ ನಿವಾಸಿ ಹಸೈನಾರ್ ಅವರ ಪತ್ನಿ ಹಾಗೂ ಆರನೇ ತರಗತಿ ವಿದ್ಯಾರ್ಥಿನಿ ಫಾತಿಮತ್ ರಾಫಿಯಾ ಬೀರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜ್ವರಕ್ಕೆ ಔಷಧಿ ಪಡಕೊಳ್ಳಲು ಗುರುವಾರ ತೆರಳಿದ್ದರು. ಚಿಕಿತ್ಸೆ ನಡೆಸಿದ ವೈದ್ಯರು ಎರಡು ದಿನ ದ ಮಟ್ಟಿಗೆ ಸೇವಿಸಲು ಮಾತ್ರೆಗಳನ್ನು ನೀಡಿದ್ದರು. ಹಸೈನಾರ್ ಅವರ ಪುತ್ರಿ ಫಾತಿಮತ್ ರಾಫಿಯಾ ಜ್ವರಕ್ಕೆ ಕುಡಿಯಲೆಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಮಾತ್ರೆ ಯನ್ನು ಪ್ಯಾಕ್ ನಿಂದ ತೆರೆದು ನೋಡಿದಾಗ ಮಾತ್ರೆಗಳಲ್ಲಿ ಫಂಗಸ್ ತರಹದ ಕಲೆಗಳಿದ್ದವು. ಈ ಬಗ್ಗೆ ಅವರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಯಲ್ಲಿ ವಿಚಾರಿಸಿದ್ದು, ಈ ವೇಳೆ ಸಿಬ್ಬಂದಿ ಎಲ್ಲಾ ಮಾತ್ರೆಗಳು ಹೀಗೇ ಇವೆ. ಏನಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ರೋಗಿಗಳಾದ ತಾಯಿ ಮಗಳು ಆ ಮಾತ್ರೆಯ ಫೋಟೋ ತೆಗೆದು ವೈದ್ಯಾಧಿಕಾರಿಗಳಿಗೆ ಕಳಿಸಿ ದೂರು ನೀಡಿದ್ದಾರೆ.
ಆನಂತರ ಮಾಜಿ ಗ್ರಾಮ ಪಂಚಾಯತ್ ಸದಸ್ಯರೋರ್ವರು ಶಿಲೀಂದ್ರ ಆವರಿಸಿದ್ದ ಮಾತ್ರೆಯ ವೀಡಿಯೋ ತೆಗೆದು ಜಿಲ್ಲಾ ಆರೋಗ್ಯಾಧಿಕಾರಿಯ ವಾಟ್ಸಪ್ ಕಳಿಸಿದ್ದಾರೆ. ತಕ್ಷಣ ಸ್ಪಂದನೆ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಎಚ್.ಆರ್ ತಿಮ್ಮಯ್ಯ, ಕೋಟೆಕಾರು ಆರೋಗ್ಯ ಕೇಂದ್ರಕ್ಕೆ ನೀಡಿರುವ ಪ್ಯಾರಸೆಟಮೋಲ್ ಮಾತ್ರೆಗಳನ್ನು ಹಿಂದಕ್ಕೆ ತರಿಸಿಕೊಂಡಿದ್ದಾರೆ.
ಬೀರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಲ್ಲಿ ಫಂಗಸ್ ತರಹದ ಕಲೆ ಇರುವ ಔಷಧಿ ನೀಡಿದ ಬಗೆ ಔಷಧಿ ಪಡಕೊಂಡ ರೋಗಿಯ ಕುಟುಂಬಸ್ಥರು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಎಚ್.ಆರ್ ತಿಮ್ಮಯ್ಯ ಅವರಿಗೆ ದೂರು ನೀಡಿದ್ದು,ಇಂತಹ ಔಷಧಿ ನೀಡುವ ಆರೋಗ್ಯ ಕೇಂದ್ರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಅಧಿಕಾರಿ ಡಾ. ಎಚ್.ಆರ್ ತಿಮ್ಮಯ್ಯ ಅವರು ” ಬೀರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಲ್ಲಿ ಶಿಲೀಂದ್ರ ಗೊಂಡ ಮಾತ್ರೆ ನೀಡಿದ ಬಗೆ ನನಗೆ ದೂರು ಬಂದಿದೆ. ಜ್ವರದ ಮಾತ್ರೆ ಬೇರೆ ಕೂಡಾ ಇದೆ. ಫಂಗಸ್ ಬಂದ ಮಾತ್ರೆ ಕೊಡದಂತೆ ಈಗಾಗಲೇ ಸೂಚನೆ ನೀಡಿದ್ದೇನೆ. ಈಗ ಆ ಮಾತ್ರೆ ಬದಲಿಗೆ ಬೇರೆ ಔಷಧಿ ವ್ಯವಸ್ಥೆ ಮಾಡಲಾಗಿದೆ” ಎಂದು ತಿಳಿಸಿದ್ದಾರೆ
Discover more from Coastal Times Kannada
Subscribe to get the latest posts sent to your email.
Discussion about this post