ಬೆಂಗಳೂರು, ಸೆಪ್ಟೆಂಬರ್ 22: ಬೆಂಗಳೂರು ನಗರದ ವೈಯಾಲಿಕಾವಲ್‌ನಲ್ಲಿ ವಾಸವಿದ್ದ ಮಹಾಲಕ್ಷ್ಮೀಯ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ನಾಲ್ವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮುಕ್ತ, ಶಶಿಧರ್, ಸುನೀಲ್ ಮತ್ತು ಅಶ್ರಫ್ ಎಂಬುವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮುಕ್ತ, ಶಶಿಧರ್ ಮತ್ತು ಸುನೀಲ್ ಮೃತ ಮಹಾಲಕ್ಷ್ಮಿಯ ಸಹೋದ್ಯೋಗಿಗಳು. ಉತ್ತರಾಖಂಡ್ ಮೂಲದ ಅಶ್ರಫ್ ಮಹಾಲಕ್ಷ್ಮಿ ಜೊತೆ ಸಲುಗೆಯಿಂದ ಇದ್ದನು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಮಹಾಲಕ್ಷ್ಮಿ ತಾನು ಕೆಲಸ ಮಾಡುವ ಕಂಪನಿಯಲ್ಲಿ ಜಗಳ ಮಾಡಿಕೊಂಡಿದ್ದಳು ಎಂದು ಮಾಹಿತಿ ನೀಡಿದ್ದಾರೆ.
ಐದು ವರ್ಷಗಳ ಹಿಂದೆ ಪತಿ ಹೇಮಂತ್ ದಾಸ್ ನಿಂದ ಬೇರ್ಪಟ್ಟಿದ್ದ ಮಹಾಲಕ್ಷ್ಮಿ ಒಂಟಿಯಾಗಿ ಜೀವನ ನಡೆಸುತ್ತಿದ್ದರು ಮತ್ತು ವೀರಣ್ಣ ಭವನ ಸಮೀಪದ ಪೈಪ್ ಲೈನ್ ರಸ್ತೆಯ 6ನೇ ಕ್ರಾಸ್ ನಲ್ಲಿರುವ ಮೂರು ಅಂತಸ್ತಿನ ಕಟ್ಟಡದ ಮೊದಲ ಮಹಡಿಯಲ್ಲಿ ವಾಸವಾಗಿದ್ದರು. ಅವರ ನಾಲ್ಕು ವರ್ಷದ ಮಗಳು ದಾಸ್ ಅವರೊಂದಿಗೆ ವಾಸಿಸುತ್ತಿದ್ದರು. ಮಗಳು ತಾಯಿಯೊಂದಿಗೆ ಸಮಯ ಕಳೆಯಲು ಪ್ರತಿ ಹದಿನೈದು ದಿನಗಳಿಗೊಮ್ಮೆ ಮಹಾಲಕ್ಷ್ಮಿಗೆ ಭೇಟಿಗೆ ದಾಸ್ ಆಗಮಿಸುತ್ತಿದ್ದರು. ಆದರೆ ಸೆಪ್ಟೆಂಬರ್ 2 ರ ನಂತರ, ಮಹಾಲಕ್ಷ್ಮಿ ಅವರ ಫೋನ್ ಸ್ವಿಚ್ ಆಫ್ ಆಗಿತ್ತು, ಮತ್ತು ದಾಸ್ ಶನಿವಾರ ತಮ್ಮ ಮಗಳೊಂದಿಗೆ ಪತ್ನಿಯನ್ನು ನೋಡಲು ಬಂದಿದ್ದರು. ಈ ವೇಳೆ ನೆರೆಹೊರೆಯವರು ಮಹಾಲಕ್ಷ್ಮಿ ಅವರ ಫ್ಲಾಟ್‌ನಿಂದ ದುರ್ವಾಸನೆ ಬರುತ್ತಿರುವುದು ಅವರ ಗಮನಕ್ಕೆ ಬಂದಿದೆ. ತಕ್ಷಣ ಮಹಾಲಕ್ಷ್ಮಿ ಅವರ ತಾಯಿ ಮತ್ತು ಸಹೋದರಿಗೆ ಮಾಹಿತಿ ನೀಡಿದ್ದಾರೆ.
ನಂತರ ದಾಸ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಮನೆಗೆ ಆಗಮಿಸಿ ಬಾಗಿಲನ್ನು ಒಡೆದು ನೋಡಿದಾಗ, ರೆಫ್ರಿಜರೇಟರ್‌ನಲ್ಲಿ ಮೃತದೇಹ ಪತ್ತೆಯಾಗಿದೆ. ದೇಹವನ್ನು ಫ್ರಿಡ್ಜ್ನಿಂದ ಹೊರ ತೆಗೆದ ಬಳಿಕ ದೇಹದ ತುಂಡುಗಳ ಲೆಕ್ಕ ಬರೆದುಕೊಂಡಿದ್ದು, 30 ಪೀಸ್ ಮಾಡಲಾಗಿದೆ ಎನ್ನಲಾಗಿದೆ. ಸದ್ಯ ಮೃತ ದೇಹ ಮತ್ತು ಸ್ಥಳ ಪರಿಶೀಲನೆ ಮುಕ್ತಾಯವಾಗಿದ್ದು, ಮೃತ ದೇಹವನ್ನು ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನಾಳೆ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಈ ಸಂಬಂಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯ ಬಂಧನಕ್ಕಾಗಿ ಹೈಗ್ರೌಂಡ್ಸ್, ಶೇಷಾದ್ರಿಪುರ ಮತ್ತು ವೈಯಾಲಿಕಾವಲ್ ಪೊಲೀಸ್ ಠಾಣೆಗಳ ಇನ್ಸ್‌ಪೆಕ್ಟರ್‌ಗಳನ್ನು ಒಳಗೊಂಡ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಮಹಾಲಕ್ಷ್ಮಿ ಮೂಲತಃ ನೇಪಾಳದವರಾಗಿದ್ದು, ಕರ್ನಾಟಕದಲ್ಲಿ ನೆಲೆಸಿದ್ದರು. ಗಂಡನಿಂದ ದೂರವಾಗಿದ್ದ ಮಹಾಲಕ್ಷ್ಮಿ ಒಬ್ಬಳೇ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಆದರೆ ಪಿಕಪ್ ಡ್ರಾಪ್ ಎಂದು ಒಬ್ಬ ಯುವಕ ಆಕೆಯನ್ನು ಕರೆದೊಯ್ಯುತ್ತಿದ್ದ. ಹೀಗಾಗಿ ಆತನೇ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಶ್ರಫ್ ಮೇಲೆ ನನಗೆ ಅನುಮಾನ ಇದೆ: ಮಹಾಲಕ್ಷ್ಮೀ ಪತಿ : ಮಹಾಲಕ್ಷ್ಮೀ ಸ್ನೇಹಿತ ಅಶ್ರಫ್ ಮೇಲೆ ನನಗೆ ಅನುಮಾನ ಇದೆ. ಈ ಹಿಂದೆ ನಾನು ನೆಲಮಂಗಲದಲ್ಲಿ ಅಶ್ರಫ್ ವಿರುದ್ಧ ದೂರು ಕೊಟ್ಟಿದ್ದೆ. ಅಶ್ರಫ್ ಉತ್ತರಾಖಂಡ್ ಮೂಲದವನು. ಒಂದು ದಿನ ಮಹಾಲಕ್ಷ್ಮೀ ಮೊಬೈಲ್ ಚೆಕ್ ಮಾಡಿದಾಗ ಅಶ್ರಫ್ ಜೊತೆ ಸಂಪರ್ಕದಲ್ಲಿರುವುದು ತಿಳಿಯಿತು ಎಂದು ಕೊಲೆಯಾದ ಮಹಾಲಕ್ಷ್ಮೀ ಪತಿ ಹೇಮಂತ್ ದಾಸ್ ಹೇಳಿದ್ದಾರೆ.
ಮನೆಯಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ಶನಿವಾರ ಮನೆ ಮಾಲೀಕರು ಫೋನ್ ಮಾಡಿದ್ದರು. ಮನೆ ಬಳಿ ಬಂದು ನೋಡಿದಾಗ ಮಹಾಲಕ್ಷ್ಮೀ ಕೊಲೆಯಾಗಿದ್ದಳು. ಮಹಾಲಕ್ಷ್ಮೀ ಕುಟುಂಬದವರು ಮೂಲತಃ ನೇಪಾಳದವರು. ಮಹಾಲಕ್ಷ್ಮೀ ಕುಟುಂಬ 35 ವರ್ಷಗಳಿಂದ ನೆಲಮಂಗಲದಲ್ಲಿ ವಾಸವಾಗಿದ್ದಳು. ನಮ್ಮದು ಅರೇಂಜ್ಡ್ ಮ್ಯಾರೇಜ್. ನನ್ನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. 9 ತಿಂಗಳ ಹಿಂದೆ ನನ್ನಿಂದ ಬೇರೆಯಾದಳು. ಮಗು ನನ್ನ ಬಳಿ ಇತ್ತು, ಮಗು ನೋಡಲು ತಿಂಗಳಿಗೊಮ್ಮೆ ಮಹಾಲಕ್ಷ್ಮೀ ಬರುತ್ತಿದ್ದಳು ಎಂದು ತಿಳಿಸಿದರು.
ನೆಲಮಂಗಲದಲ್ಲಿ ನಾನು ಮೊಬೈಲ್ ಶಾಪ್ ಇಟ್ಟುಕೊಂಡಿದ್ದೇನೆ. ಮೊಬೈಲ್ ಶಾಪ್‌ನಲ್ಲೇ ಮಗುವನ್ನು ನೋಡಿಕೊಂಡು ವಾಪಸ್ ಹೋಗುತ್ತಿದ್ದಳು. 25 ದಿನಗಳ ಹಿಂದೆ ಮೊಬೈಲ್ ಶಾಪ್‌ಗೆ ಬಂದು ಮಗುವನ್ನು ನೋಡಿ ಹೋಗಿದ್ದಳು. ಮಗು ನೋಡಲು ಬಂದಾಗ ನನ್ನ ಜೊತೆ ಕೋಪದಲ್ಲೇ ಮಾತನಾಡುತ್ತಿದ್ದಳು ಎಂದು ಹೇಳಿದರು
Discover more from Coastal Times Kannada
Subscribe to get the latest posts sent to your email.
Discussion about this post