ಶಿರ್ವ: ಕಳತ್ತೂರು ಗ್ರಾಮದ ನಡಿಗುತ್ತು ಬಳಿ ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರ್ವ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪ್ರಕರಣದ ವಿವರ: ಕಳತ್ತೂರು ನಡಿಗುತ್ತು ಬಳಿಯ ನಿವಾಸಿ ವಸಂತಿ ಸುನೀತಾ ಕ್ವಾಡ್ರಸ್ ಅವರು ಸೆ. 19 ರಂದು ಸಂಜೆ ಹೊತ್ತು ಮೇಯಲು ಬಿಟ್ಟಿದ್ದ 5 ದನಗಳ ಪೈಕಿ 2 ವರ್ಷ ಪ್ರಾಯದ ಒಂದು ಕಪ್ಪು ಬಣ್ಣದ ದನ ಕಾಣೆಯಾಗಿತ್ತು. ಹುಡುಕಾಟ ನಡೆಸಿದಾಗ ಅಲ್ಲಿಯೇ ಹತ್ತಿರದಲ್ಲಿ ನಿಂತಿದ್ದ ಟೆಂಪೋದಲ್ಲಿ ಕಾಣೆಯಾದ ದನ ಸೇರಿದಂತೆ ಇನ್ನೊಂದು ದನವನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿದ್ದು ಪತ್ತೆಯಾಗಿತ್ತು.
ಆಗ ವಾಹನದ ಬಳಿಯಲ್ಲಿ ಉಮ್ಮರಬ್ಬ ಮತ್ತು ಇತರ ಮೂರು ಜನರು ಇದ್ದು, ಸುನೀತಾ ಅವರನ್ನು ಕಂಡ ಕೂಡಲೇ ಟೆಂಪೋ ಸಹಿತ ಪರಾರಿಯಾಗಿದ್ದರು. ಈ ಬಗ್ಗೆ ಸುನೀತಾ ಕ್ವಾಡ್ರಸ್ ಅವರು ಶಿರ್ವ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಶಿರ್ವ ಪೊಲೀಸರು ಸೆ. 19 ರಂದು ಕಳತ್ತೂರಿನ ಉಮ್ಮರಬ್ಬ (64) ಎಂಬಾತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳಾದ ಮೊಹಮ್ಮದ್ ಶರೀಫ್ (31), ಶಂಶುದ್ದೀನ್ (57) ಮತ್ತು ಮಹಮ್ಮದ್ ಆಸೀರ್ (24) ಅವರನ್ನು ಸೆ. 20 ರಂದು ಕಾಪು ಕೊಪ್ಪಲಂಗಡಿಯಲ್ಲಿ ವಾಹನ ಸಮೇತ ಪತ್ತೆ ಹಚ್ಚಿ ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಟೆಂಪೋ ಮತ್ತು ದನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನೊಂದು ದನದ ವಾರಸುದಾರರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಇಶಿತಾ ಗುಪ್ತ ಹಾಗೂ ಕಾಪು ಪೊಲೀಸ್ ವೃತ್ತ ನಿರೀಕ್ಷಕರಾದ ಅಝಮತ್ ಆಲಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಶಿರ್ವ, ಪಡುಬಿದ್ರಿ, ಹೆಬ್ರಿ ಠಾಣೆಯ ಉಪನಿರೀಕ್ಷಕರು, ಸಿಬಂದಿ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯ ಸಿ.ಡಿ.ಆರ್ ವಿಭಾಗದ ಸಿಬಂದಿ ಭಾಗವಹಿಸಿದ್ದರು.
Discover more from Coastal Times Kannada
Subscribe to get the latest posts sent to your email.







Discussion about this post