ಮಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ದಕ್ಷಿಣ ಕನ್ನಡ ದ್ವಿಸದಸ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಂಜುನಾಥ ಭಂಡಾರಿ ಕಣಕ್ಕೆ ಇಳಿಯಲಿದ್ದಾರೆ. ಮಂಗಳವಾರ (ನ.23) ನಾಮಪತ್ರ ಸಲ್ಲಿಸಲಿದ್ದಾರೆ.
ಇದುವರೆಗೆ ಉಡುಪಿ ಜಿಲ್ಲೆಯ ಪಾಲಾಗಿದ್ದ ಕಾಂಗ್ರೆಸ್ ಟಿಕೆಟ್ ಇದೀಗ, ದಕ್ಷಿಣ ಕನ್ನಡ ಜಿಲ್ಲೆಯವರಿಗೆ ದೊರೆತಿದೆ. ಈ ಮೂಲಕ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕ ತುಸು ಮೇಲುಗೈ ಸಾಧಿಸಿದೆ. ಈ ಮೊದಲು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರಕುಮಾರ್ ಅವರನ್ನೇ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಕಾಂಗ್ರೆಸ್ ಉಡುಪಿ ಜಿಲ್ಲಾ ಘಟಕದ ಮುಖಂಡರು ಪ್ರಯತ್ನಿಸಿದ್ದರು. ಆದರೆ, ರಾಜೇಂದ್ರಕುಮಾರ್ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದು, ಇದೀಗ ಮಂಜುನಾಥ ಭಂಡಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.
ಮೊದಲಿನಿಂದಲೂ ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮಂಜುನಾಥ ಭಂಡಾರಿ, ರಾಷ್ಟ್ರಮಟ್ಟದ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅದರ ಪರಿಣಾಮವಾಗಿಯೇ 11 ಆಕಾಂಕ್ಷಿಗಳ ಮಧ್ಯೆ ಮಂಜುನಾಥ ಭಂಡಾರಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.