ಮಂಗಳೂರು: ವಿದ್ಯಾರ್ಥಿಗಳು ಜ್ಞಾನ ಹೊಂದುವ ಜತೆಗೆ ಕಲಿತು ಉನ್ನತ ಅಧಿಕಾರಿಗಳಾಗಿ ದೇಶಕ್ಕೆ ಕೀರ್ತಿ ತರುವ ಕೆಲಸದತ್ತ ಗಮನ ಹರಿಸಬೇಕು ಎಂದು ಪದ್ಮಶ್ರೀ ಪುರಸ್ಕೃತ ಅಕ್ಷರಸಂತ ಹರೇಕಳ ಹಾಜಬ್ಬ ಹೇಳಿದರು.
ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ಸಂಘಟನೆ ವತಿಯಿಂದ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ‘ಮಾಮ್ ಇನ್‌ಸ್ಪೈರ್ ಅವಾರ್ಡ್’ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಹರೇಕಳದ ಮೂಲೆಯಲ್ಲಿದ್ದ ನನ್ನನ್ನು ಮಾಧ್ಯಮ ಗುರುತಿಸಿ ಇದುವರೆಗೆ ಬೆಳೆಸಿದೆ. ಸಾಮಾನ್ಯ ಮನುಷ್ಯನಾದ ನನಗೆ ಪದ್ಮಶ್ರೀಯಂತಹ ಪ್ರಶಸ್ತಿ ದೊರೆಯುವಲ್ಲಿ ಮಾಧ್ಯಮಗಳ ಪಾತ್ರ ಮಹತ್ವವಾದುದು. ಮಾಧ್ಯಮದ ಎಲ್ಲರಿಗೂ ನನ್ನ ಕೃತಜ್ಞತೆಗಳು ಎಂದರು.
ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ ಗುರುವಪ್ಪ ಎನ್.ಟಿ.ಬಾಳೇಪುಣಿ ಮಾತನಾಡಿ, ಸರಳತೆ, ಮುಗ್ಧತೆ, ಪ್ರಾಂಜಲ ಮನಸ್ಸು ಹಾಜಬ್ಬ ಅವರ ಆಭರಣಗಳಾಗಿವೆ. ಅವರು ತಮ್ಮ ವೈಯಕ್ತಿಕ ಬದುಕಿಗಿಂತ ಹರೇಕಳದ ಶಾಲೆಗೆ ಮಹತ್ವ ನೀಡಿ, ಶಾಲೆಯೇ ಸರ್ವಸ್ವ ಎನ್ನುವ ರೀತಿಯಲ್ಲಿ ಜೀವಿಸುತ್ತಿದ್ದಾರೆ. ಹಾಜಬ್ಬ ಅವರಂತಹ ಹತ್ತಾರು ಮಂದಿ ಸಮಾಜದಲ್ಲಿ ಇದ್ದಾರೆ. ಮಾಧ್ಯಮಗಳು ಅಂತವರನ್ನು ಬೆಳಕಿಗೆ ತಂದು ಪ್ರೋತ್ಸಾಹಿಸಬೇಕಿದೆ ಎಂದರು. ಮಾಮ್ ಗೌರವಾಧ್ಯಕ್ಷ ವೇಣು ಶರ್ಮ ಮಾತನಾಡಿ, ಪತ್ರಿಕೋದ್ಯಮ ಶಿಕ್ಷಣ ಹೊಸ ಚಿಂತನೆ, ಬದಲಾವಣೆಗಳೊಂದಿಗೆ ಹೊಸ ರೂಪವನ್ನು ಪಡೆಯಬೇಕೆಂದು ಆಶಯ ವ್ಯಕ್ತಪಡಿಸಿದರು.
‘ಮಾಮ್ ಇನ್‌ಸ್ಪೈರ್’ ಪ್ರಶಸ್ತಿ ಪ್ರದಾನ: ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದಲ್ಲಿ ಮೂಡುಬಿದಿರೆ ಆಳ್ವಾಸ್ ಕಾಲೇಜು ವಿದ್ಯಾರ್ಥಿನಿ ಶ್ರೀರಕ್ಷಾ ರಾವ್ ಪುನರೂರು ಪ್ರಥಮ ಸ್ಥಾನ, ಪದವಿ ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ದುರ್ಗಾ ಪ್ರಸನ್ನ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಎಸ್‌ಡಿಎಂ ಕಾಲೇಜಿನ ಪ್ರಜ್ಞಾ ಓಡಿಲ್ನಾಳ ಪಡೆದುಕೊಂಡಿದ್ದು, ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಾಮ್ ಅಧ್ಯಕ್ಷ ಸುರೇಶ್ ಪುದುವೆಟ್ಟು ಅಧ್ಯಕ್ಷತೆ ವಹಿಸಿದ್ದರು. `ಮಾಮ್ ಇನ್‌ಸ್ಪೈರ್ ಅವಾರ್ಡ್’ ಪ್ರಶಸ್ತಿ ಸಮಿತಿ ಸಂಚಾಲಕ ಶರತ್ ಹೆಗ್ಡೆ ಕಡ್ತಲ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಮಾಮ್ ಪ್ರಧಾನ ಕಾರ್ಯದರ್ಶಿ ಸುರೇಶ್ ಡಿ. ಪಳ್ಳಿ ಪ್ರಶಸ್ತಿ ಪುರಸ್ಕೃತರ ವಿವರ ನೀಡಿದರು. ಉಪಾಧ್ಯಕ್ಷ ವೇಣುವಿನೋದ್ ಕೆ.ಎಸ್. ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಕೃಷ್ಣಮೋಹನ್ ತಲೆಂಗಳ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಕೃಷ್ಣ ಕಿಶೋರ್, ಹರೀಶ್ ಮೋಟುಕಾನ ಸಹಕರಿಸಿದರು.