ವಾಷಿಂಗ್ಟನ್: ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ, ಇಲ್ಲಿನ ಭಾರತೀಯ ಸಮುದಾಯಕ್ಕೆ ‘ಸ್ಥಿತ್ಯಂತರದ ಕ್ಷಣ’ವಾಗಿದೆ ಎಂದು ಲಾಸ್ ಏಂಜಲೀಸ್ ಟೈಮ್ಸ್ ದೈನಿಕ ಅಭಿಪ್ರಾಯಪಟ್ಟಿದೆ.
‘ಪ್ರಮುಖ ಮೈತ್ರಿ ದೇಶಗಳಲ್ಲೊಂದಾದ ಭಾರತದ ಪ್ರಧಾನಮಂತ್ರಿಯನ್ನು ಅಮೆರಿಕದ ಉಪಾಧ್ಯಕ್ಷೆ ಸ್ಥಾನಕ್ಕೇರಿರುವ ಭಾರತೀಯ–ಅಮೆರಿಕನ್ ಭೇಟಿಯಾಗುತ್ತಿದ್ದಾರೆ’ ಎಂದು ಪತ್ರಿಕೆ ಹೇಳಿದೆ.
‘ಅಮೆರಿಕದಲ್ಲಿ ನೆಲೆಸಿರುವ ಭಾರತೀಯರ ಸಂಖ್ಯೆ 40 ಲಕ್ಷಕ್ಕೂ ಅಧಿಕ. ಕಮಲಾ ಹ್ಯಾರಿಸ್ ಹಾಗೂ ನರೇಂದ್ರ ಮೋದಿ ಅವರ ಭೇಟಿ ನಮ್ಮ ಪಾಲಿಗೆ ಮಹತ್ವದ ಕ್ಷಣ. ಉಭಯ ದೇಶಗಳ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಲಿದೆ’ ಎಂದು ಕಾರ್ನಿಗಿ ಎಂಡೋಮೆಂಟ್ ಫಾರ್ ಇಂಟರ್‌ನ್ಯಾಷನಲ್ ಪೀಸ್ ಸಂಘಟನೆಯ ದಕ್ಷಿಣ ಏಷ್ಯಾ ವಿಭಾಗದ ನಿರ್ದೇಶಕ ಮಿಲನ್ ವೈಷ್ಣವ್ ಹೇಳಿದರು.
ಕಮಲಾ ಹ್ಯಾರಿಸ್ ಅವರು ಮೋದಿ ಅವರೊಂದಿಗೆ ಜೂನ್ 3ರಂದು ದೂರವಾಣಿ ಮೂಲಕ ಮಾತನಾಡಿದ್ದರು. ಅವರು ಇದೇ ಮೊದಲ ಬಾರಿಗೆ ಪರಸ್ಪರ ಭೇಟಿಯಾಗುತ್ತಿದ್ದಾರೆ.