ಗುರುಪುರ : ಎಡಪದವಿನ ಪಟ್ಲಚ್ಚಿಲ್ ನಿವಾಸಿ, ಎಂಸಿಎಫ್ನಲ್ಲಿ ಎಸಿ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದ ಕೇಶವ (24) ಬುಧವಾರ ಕಣಜದ ಹುಳುಗಳ ದಾಳಿಯಿಂದ ತೀವ್ರ ಗಾಯಗೊಂಡು ಮೃತಪಟ್ಟಿದ್ದಾರೆ.
ತೆಂಗಿನಕಾಯಿ ಕೀಳಲು ಹೊಸದಾಗಿ ಖರೀದಿಸಿದ್ದ ಯಂತ್ರ ಬಳಸಿ ಬುಧವಾರ ನೆರೆಮನೆಯವರ ತೆಂಗಿನ ಮರದಿಂದ ಕಾಯಿ ಕೀಳಲು ಮರವೇರಿದ ಸಂದರ್ಭ ಮರದಲ್ಲಿದ್ದ ಕಣಜದ ಹುಳುವಿನ ಗೂಡಿಗೆ ಕೇಶವರ ತಲೆ ತಾಗಿತ್ತು. ಈ ಸಂದರ್ಭ ಏಕಾಏಕಿಯಾಗಿ ಹುಳುಗಳು ದಾಳಿ ಮಾಡಿದ್ದವು. ಅವರ ಮೈಮೇಲೆ 70ಕ್ಕೂ ಹೆಚ್ಚು ಕಡೆ ಗಾಯಗಳಾಗಿವೆ. ತಕ್ಷಣ ಮೂಡುಬಿದಿರೆ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.