ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಬೆಂಕಿ ಅವಘಡ ಸಂಭವಿಸಿದ್ದು, ಸ್ಫೋಟದ ತೀವ್ರತೆಗೆ ಸ್ಥಳದಲ್ಲೇ ಇಬ್ಬರು ದುರ್ಮರಣ ಹೊಂದಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಮೃತರ ದೇಹ ಛಿದ್ರಛಿದ್ರವಾಗಿ ಸುಮಾರು ದೂರದವರೆಗೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ದೃಶ್ಯ ಸ್ಥಳೀಯರನ್ನ ಬೆಚ್ಚಿಬೀಳಿಸಿದೆ.
‘ಫಯಾಜ್ (50), ಮನೋಹರ್ (29) ಹಾಗೂ ಅಸ್ಲಂ (45) ಮೃತರು ಎಂಬುದು ಗೊತ್ತಾಗಿದೆ. ಛಿದ್ರವಾಗಿರುವ ದೇಹಗಳನ್ನು ಒಟ್ಟುಗೂಡಿಸಿ ಆಸ್ಪತ್ರೆಗೆ ಸಾಗಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
ಟಾಟಾ ಏಸ್‌ನಲ್ಲಿ ಪಟಾಕಿ ಬಾಕ್ಸ್‌ಗಳನ್ನು ತಂದಿದ್ದ ಮನೋಹರ್, ಮಳಿಗೆಯೊಳಗೆ ಅನ್‌ಲೋಡ್ ಮಾಡಿದ್ದ. ಮಾಲೀಕ ಫಯಾಜ್ ಜೊತೆ ಮಾತನಾಡುತ್ತ ನಿಂತಿದ್ದ. ಇದೇ ಸಂದರ್ಭದಲ್ಲಿ ಸ್ಪೋಟೊ ಸಂಭವಿಸಿದೆ. ಇಬ್ಬರೂ ಹಾರಿ ಹೊರಗೆ ಬಿದ್ದಿದ್ದಾರೆ. ಅವರ ದೇಹಗಳು ಛಿದ್ರಗೊಂಡಿವೆ’ ಎಂದೂ ಪೊಲೀಸರು ತಿಳಿಸಿದರು.
‘ಸ್ಫೋಟದ ತೀವ್ರತೆಗೆ ಪಟಾಕಿ ಮಳಿಗರ, ಪಕ್ಕದಲ್ಲಿದ್ದ ಪಂಕ್ಚರ್ ಮಳಿಗೆ ಹಾಗೂ ಚಹಾ ಅಂಗಡಿ ಸಂಪೂರ್ಣ ಸುಟ್ಟು ಹೋಗಿದೆ. ಟಾಟಾ ಏಸ್ ವಾಹನ ಹಾಗೂ 10 ದ್ವಿಚಕ್ರ ವಾಹನಗಳು ನಜ್ಜುಗುಜ್ಜಾಗಿವೆ. ಪಂಕ್ಚರ್ ಅಂಗಡಿಯಲ್ಲಿ ಕುಳಿತಿದ್ದ ಅಸ್ಲಂ ಸಹ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದೂ ಹೇಳಿದರು.
ಅಕ್ಕ-ಪಕ್ಕದ ಮನೆಗಳು, ಸೇಂಟ್ ಮೇರಿ ಆಸ್ಪತ್ರೆ, ವಿದ್ಯಾರ್ಥಿಗಳ ವಸತಿ ನಿಲಯಕ್ಕೂ ಹಾನಿ ಆಗಿದೆ. ಬಾಂಬ್ ಸ್ಪೋಟವಾದ ರೀತಿಯಲ್ಲಿ ಸದ್ದು ಕೇಳಿಸಿತೆಂದು ಸ್ಥಳೀಯರು ಹೇಳುತ್ತಿದ್ದಾರೆ.