ಮಂಗಳೂರು: ನವೆಂಬರ್ ತಿಂಗಳ 4 – 5 ರಂದು ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ನಡೆಯುವ 25 ನೇ ಅಖಿಲ ಭಾರತೀಯ ಕೊಂಕಣಿ ಸಾಹಿತ್ಯ ಸಮ್ಮೇಳನದ ಕಾರ್ಯಾಲಯದ ಉದ್ಘಾಟಣೆ ಮತ್ತು ಸ್ವಾಗತ ಸಮಿತಿಯ ಪ್ರಥಮ ಸಭೆ ಬೆಂದೂರ್‌ವೆಲ್ ಶ್ರೀ ಟಾಯ್ಟಸ್ ನೊರೊನ್ಹಾ ಅವರ ರಾಹುಲ್ ಎಡ್ವರ್ಟೈರರ್ಸ್ ಕಛೇರಿಯಲ್ಲಿ ನಡೆಯಿತು.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಶ್ರೀ ನಂದಗೋಪಾಲ ಶೆಣೈ ದೀಪ ಬೇಳಗಿಸಿ, ಸಮ್ಮೇಳನ ಕಾರ್ಯಾಲಯ ಮತ್ತು ಸ್ವಾಗತ ಸಮಿತಿಯ ಪ್ರಥಮ ಸಭೆಗೆ ವಿದ್ಯುಕ್ತ ಚಾಲನೆ ನೀಡಿದರು. ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಶ್ರೀ ಗೋಕುಲದಾಸ ಪ್ರಭು, ಶಾಲೆಗಳಲ್ಲಿ ಕೊಂಕಣಿ ಶಿಕ್ಷಣ ಚಳುವಳಿಯ ನೇತಾರ, ಖ್ಯಾತ ಹೃದ್ರೋಗ ತಜ್ಞ ಡಾ| ಕಸ್ತೂರಿ ಮೋಹನ ಪೈ, ಮಾತೃ ಸಂಸ್ಥೆ ಅಖಿಲ ಭಾರತ ಕೊಂಕಣಿ ಸಾಹಿತ್ಯ ಪರಿಷತ್ತಿನ ಕಾರ್ಯಾಧ್ಯಕ್ಷ ಶ್ರೀ ಚೇತನ್ ಆಚಾರ್ಯ, ಗೋವಾ, ಸಾಹಿತ್ಯ ಅಕಾಡೆಮಿ, ನವ ದೆಹಲಿ ಕಾರ್ಯಕಾರಿ ಸಮಿತಿ ಸದಸ್ಯ ಮತ್ತು ಕೊಂಕಣಿ ಭಾಷಾ ಮುಖ್ಯಸ್ಥ ಕವಿ ಮೆಲ್ವಿನ್ ರೊಡ್ರಿಗಸ್ ಮತ್ತು ಕೊಂಕಣಿ ಕವಿ ಮತ್ತು ಚಿಂತಕ ಶ್ರೀ ಟೈಟಸ್ ನೊರೊನ್ಹಾ ಈ ಸಂದರ್ಭದಲ್ಲಿ ಹಾಜರಿದ್ದರು.
ಸಾಹಿತ್ಯ ಸಮ್ಮೇಳನದ ಮಾತೃ ಸಂಸ್ಥೆ ಅಖಿಲ ಭಾರತ ಕೊಂಕಣಿ ಪರಿಷತ್ ಇದರ ಕಾರ್ಯಾಧ್ಯಕ್ಷ ಶ್ರೀ ಚೇತನ್ ಆಚಾರ್ಯ, ಗೋವಾ ಅಖಿಲ ಭಾರತ ಕೊಂಕಣಿ ಪರಿಷತ್ ಸ್ಥಾಪನೆ, ಪರಿಷತ್ತಿನ ಧ್ಯೇಯೋದ್ದೇಶಗಳು, ಈ ವರೆಗೆ ಭಾರತದಾದ್ಯಂತ ನಡೆದ ಕೊಂಕಣಿ ಭಾಷಾ ಚಳುವಳಿಗಳು, ಕೊಂಕಣಿ ಭಾಷೆಗೆ ರಾಷ್ಟ್ರೀಯ ಭಾಷೆಯ ಸ್ಥಾನಮಾನ ಲಭಿಸಲು ಪರಿಷತ್ ವತಿಯಿಂದ ಹಿರಿಯರು ನಡೆಸಿದ ಹೋರಾಟ ಮತ್ತು ಕೊಂಕಣಿ ಭಾಷೆಯ ಬೆಳವಣಿಗೆಯ ನಿಟ್ಟಿನಲ್ಲಿ ಎದುರಿಸಬೇಕಾದ ಸವಾಲುಗಳು ಈ ಬಗ್ಗೆ ಚುಟುಕಾಗಿ ವಿವರಿಸಿದರು.
ಸಾಹಿತ್ಯ ಅಕಾಡೆಮಿ, ನವ ದೆಹಲಿ ಕಾರ್ಯಕಾರಿ ಸಮಿತಿ ಸದಸ್ಯ ಮತ್ತು ಕೊಂಕಣಿ ಭಾಷಾ ಮುಖ್ಯಸ್ಥ ಕವಿ ಮೆಲ್ವಿನ್ ರೊಡ್ರಿಗಸ್ ಮಂಗಳೂರಿನಲ್ಲಿ ಸುಮಾರು ಮೂರು ದಶಕಗಳ ಹಿಂದೆ ನಡೆದ ಪರಿಷತ್ತಿನ ಅಧಿವೇಶನವನ್ನು ಸ್ಮರಿಸಿ, ಇದೇ ಪ್ರಥಮ ಬಾರಿಗೆ ಮಂಗಳೂರಿನಲ್ಲಿ 25 ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ರಜತ ಸಮ್ಮೇಳನವನ್ನು ಸ್ಮರಣಾರ್ಹ ಮಾಡುವ ನಿಟ್ಟಿನಲ್ಲಿ ಕೊಂಕಣಿಗಾಗಿ ಶ್ರಮಿಸುವ ಸಂಘ ಸಂಸ್ಥೆಗಳ ಸಹಕಾರ ಕೋರಿದರು.
ಕಾರ್ಯಕ್ರಮಕ್ಕೆ ವಿಶ್ವ ಕೊಂಕಣಿ ಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಗುರುದತ್ತ ಬಂಟ್ವಾಳ್‌ಕರ್, ಸಂತ ಅಲೋಶಿಯಸ್ ಕಾಲೇಜಿನ ಕೊಂಕಣಿ ವಿಭಾಗ ಮುಖ್ಯಸ್ಥೆ ಪ್ರೊ| ಪ್ಲೋರಾ ಕಾಸ್ತೆಲಿನೊ, ಖ್ಯಾತ ನಿರೂಪಕಿ ಶ್ರೀಮತಿ ಸುಚಿತ್ರಾ ಎಸ್. ಶೆಣೈ, ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಶ್ರೀ ವೇಂಕಟೇಶ ನಾಯಕ್, ರಾಕ್ಣೊ ಪತ್ರಿಕೆಯ ಸಂಪಾದಕ ವಂ| ರೂಪೇಶ್ ಮಾಡ್ತಾ, ಉಜ್ವಾಡ್ ಪತ್ರಿಕೆಯ ಸಂಪಾದಕ ವಂ| ಆಲ್ವಿನ್ ಕಾರ್ಮೆಲಿತ್, ಕೊಂಕಣಿ ನಾಟಕ ಸಭಾದ ಶ್ರೀ ಫ್ಲೋಯ್ಡ್ ಕಾಸ್ಸಿಯಾ, ಶ್ರೀ ಜೆರಾಲ್ದ್ ಕೊನ್ಸೆಸೊ, ಆಕಾರ್ ಸಂಸ್ಥೆಯ ಶ್ರೀ ದಯಾ ವಿಕ್ಟರ್ ಲೋಬೊ, ಸಾಹಿತಿ ಶ್ರೀ ವಿನ್ಸೆಂಟ್ ಪಿಂಟೊ, ಆಂಜೆಲೋರ್ ಮತ್ತಿತರ ಗಣ್ಯರು ಹಾಜರಿದ್ದು ಸಲಹೆ ಸೂಚನೆಗಳನ್ನು ನೀಡಿದರು.
ಸಾಹಿತ್ಯ ಅಕಾಡೆಮಿ, ನವದೆಹಲಿ ಕೊಂಕಣಿ ಭಾಷಾ ಸಲಹಾ ಸಮಿತಿ ಸದಸ್ಯ ಮತ್ತು ಪತ್ರಕರ್ತ ಶ್ರೀ ಎಚ್ಚೆಮ್, ಪೆರ್ನಾಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post