ಕೊಲ್ಲಂ: ಪತ್ನಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಕೇರಳದ ಮಾಜಿ ಸಹಾಯಕ ಆರ್ ಟಿಓ ಅಧಿಕಾರಿ ಕಿರಣ್ ಕುಮಾರ್‌ಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಮಂಗಳವಾರ ಹತ್ತು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಕಳೆದ ವರ್ಷ ಜೂನ್‌ನಲ್ಲಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದ ಆಯುರ್ವೇದ ವೈದ್ಯಕೀಯ ವಿದ್ಯಾರ್ಥಿನಿ ವಿಸ್ಮಯಾಳಿಗೆ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಪ್ರಕರಣದಲ್ಲಿ ಪತಿ ದೋಷಿ ಎಂದು ಸೋಮವಾರ ತೀರ್ಪು ನೀಡಿದ್ದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿತ್ತು.
ಇಂದು ತೀರ್ಪು ಪ್ರಕಟಿಸಿದ ಕೊಲ್ಲಂ ನ್ಯಾಯಾಲಯ, ವಿಸ್ಮಯಾ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಕಿರಣ್ ಕುಮಾರ್‌ಗೆ 10 ವರ್ಷ ಜೈಲು ಶಿಕ್ಷೆ ಹಾಗೂ 12.55 ರೂ. ಲಕ್ಷ ದಂಡ ವಿಧಿಸಿದ್ದು, ಅದರಲ್ಲಿ 2 ಲಕ್ಷವನ್ನು ವಿಸ್ಮಯಾ ಅವರ ಪೋಷಕರಿಗೆ ಪಾವತಿಸಬೇಕು ಎಂದು ಸೂಚಿಸಿದೆ. ತೀರ್ಪನ್ನು ಪ್ರಕಟಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ-1 ನ್ಯಾಯಾಧೀಶ ಕೆಎನ್ ಸುಜಿತ್ ಅವರು ದಂಡವನ್ನು ಪಾವತಿಸದಿದ್ದಲ್ಲಿ ಶಿಕ್ಷೆಯ ವಿಸ್ತರಣೆಗೆ ಕಾರಣವಾಗುತ್ತದೆ ಎಂದು ಎಚ್ಚರಿಸಿದ್ದಾರೆ. ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ವಿಸ್ಮಯಾ ಅವರ ತಂದೆ ತ್ರಿವಿಕ್ರಮನ್ ನಾಯರ್ ಮತ್ತು ತಾಯಿ ಸಜಿತಾ, ಎಡ ಸರ್ಕಾರ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಬೆಂಬಲವನ್ನು ಶ್ಲಾಘಿಸಿದ್ದು, ಕಿರಣ್ ಕುಮಾರ್‌ಗೆ ಜೀವಾವಧಿ ಶಿಕ್ಷೆಗಾಗಿ ತಮ್ಮ ಕುಟುಂಬ ಹೈಕೋರ್ಟ್‌ಗೆ ಮೊರೆ ಹೋಗುವುದಾಗಿ ತಿಳಿಸಿದ್ದಾರೆ. ಸರ್ಕಾರಿ ಸೇವೆಯಿಂದ ತೆಗೆದುಹಾಕಲ್ಪಟ್ಟ ಕಿರಣ್ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 498A ಮತ್ತು 304B (ವರದಕ್ಷಿಣೆ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಿರಣ್ ಕುಮಾರ್ ಅವರ ವಯಸ್ಸು ಮತ್ತು ಅವರ ವಯಸ್ಸಾದ ಪೋಷಕರ ಆರೋಗ್ಯವನ್ನು ಪರಿಗಣಿಸಿ ಜೀವಾವಧಿ ಶಿಕ್ಷೆಯನ್ನು ತಪ್ಪಿಸಬೇಕು ಎಂದು ಕಿರಣ್ ಕುಮಾರ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ, ವಿಸ್ಮಯಾ ಅವರ ಆತ್ಮಹತ್ಯೆ ಬಹುತೇಕ ಕೊಲೆಗೆ ಹೋಲುತ್ತದೆ ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು.
Discover more from Coastal Times Kannada
Subscribe to get the latest posts sent to your email.
Discussion about this post