ಮಂಗಳೂರು, ಜೂನ್ 24: ಸುರತ್ಕಲ್ ಠಾಣೆ ವ್ಯಾಪ್ತಿಯ ಕಾಟಿಪಳ್ಳದಲ್ಲಿ ಪಿಯುಸಿ ಮೊದಲ ವರ್ಷ ಕಲಿಯುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಕಾಟಿಪಳ್ಳ 3ನೇ ಬ್ಲಾಕ್ ನಿವಾಸಿ ಸಂತೋಷ್ ಡಿಸೋಜ ಎಂಬವರ ಪುತ್ರಿ ಮನಿಷಾ ಡಿಸೋಜ(17) ಸಾವನ್ನಪ್ಪಿದ ವಿದ್ಯಾರ್ಥಿನಿ. ಸ್ಥಳೀಯ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಕಲಿಯುತ್ತಿದ್ದ ವಿದ್ಯಾರ್ಥಿನಿ ನಿನ್ನೆ ಸಂಜೆ ಕಾಲೇಜಿನಿಂದ ಮನೆಗೆ ಬಂದಿದ್ದು, ಬಳಿಕ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ. ಈ ವೇಳೆ, ತಾಯಿ ಮನೆಯಲ್ಲೇ ಇದ್ದು, ಹೊರಗಡೆ ಕೆಲಸ ಮಾಡುತ್ತಿದ್ದರು.

ಪೊಲೀಸರ ಪ್ರಕಾರ, ಗಂಜಿಮಠ ಮೂಲದ ಮನೀಶ್ ಪೂಜಾರಿ ಎಂಬಾತ ಅಪ್ರಾಪ್ತ ಬಾಲಕಿಗೆ ಪ್ರೀತಿಯ ನಂಬಿಕೆ ಮೂಡಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ ಎನ್ನಲಾಗಿದೆ. ಇದರಿಂದ ಬಾಲಕಿ ಗರ್ಭಿಣಿಯಾಗಿದ್ದಳು ಎಂದು ತಿಳಿದುಬಂದಿದೆ. ಈ ವಿಚಾರವನ್ನು ಬಾಲಕಿ ಮನೀಶ್‌ಗೆ ತಿಳಿಸಿದಾಗ, ಆತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿ ತಿರಸ್ಕರಿಸಿದ ಹಿನ್ನೆಲೆ ಬಾಲಕಿ ಜೂ,22ರಂದು ತನ್ನ ತಾಯಿಗೆ ನಡೆದ ವಿಚಾರವನ್ನು ತಿಳಿಸಿದ್ದಳು. ತಾಯಿ ಆಕೆಗೆ ಧೈರ್ಯ ಹೇಳಿ ಸಮಾಧಾನಪಡಿಸಿದ್ದರು. ಆದರೆ ತಾಯಿ ಮರುದಿನ ಮಂಗಳವಾರ ಬೆಳಗ್ಗೆ ಕೆಲಸಕ್ಕೆ ತೆರಳಿ ಹಿಂದಿರುಗಿ ಮನೆಗೆ ಬಂದಾಗ ಬಾಲಕಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಬಾಲಕಿಯ ತಾಯಿ ಸುರತ್ಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ಆರೋಪಿ ಮನೀಶ್ ಪೂಜಾರಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳು ಹಾಗೂ ಪೊಕ್ಸೊ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗೆ ಕ್ರಮ ಕೈಗೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Discover more from Coastal Times Kannada
Subscribe to get the latest posts sent to your email.







Discussion about this post