ಉಡುಪಿ: ಶಿರ್ವ ಮತ್ತು ಉಡುಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಒಟ್ಟು 9 ಮಂದಿಯನ್ನು ಬಂಧಿಸಲಾಗಿದ್ದು,ನಿಷೇಧಿತ ಮಾದಕ ವಸ್ತು, ನಗದು ಹಾಗೂ ಕೃತ್ಯಕ್ಕೆ ಬಳಸಿದ ವಾಹನಗಳು ಸೇರಿದಂತೆ ಒಟ್ಟು ರೂ. 16,01,584/- ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶಿರ್ವ ಠಾಣಾ ವ್ಯಾಪ್ತಿಯಲ್ಲಿ 8 ಜನರ ಬಂಧನ: ಸೆ. 22 ರಂದು ಮಧ್ಯಾಹ್ನ, ಕಾಪು ತಾಲೂಕಿನ ಬೆಳ್ಳೆ ಗ್ರಾಮದ ಪಡುಬೆಳ್ಳೆ ಭದ್ರಮ್ಮ ರಸ್ತೆ ಬಳಿ ಕೆಲವು ವ್ಯಕ್ತಿಗಳು ಮಾದಕ ವಸ್ತುಗಳನ್ನು ಹೊಂದಿದ್ದಾರೆಂದು ಕಾಪು ಪೊಲೀಸ್ ಠಾಣಾ ಪಿಎಸ್‌ಐ ಶುಭಕರ ಅವರಿಗೆ ಖಚಿತ ಮಾಹಿತಿ ಲಭಿಸಿತ್ತು. ಸಂಜೆ 4:35 ರ ಸುಮಾರಿಗೆ ಪೊಲೀಸರು ದಾಳಿ ನಡೆಸಿದಾಗ, ಆರೋಪಿಗಳು ಮಾರಾಟದ ಉದ್ದೇಶದಿಂದ ಮಾದಕ ವಸ್ತುಗಳನ್ನು ಇಟ್ಟುಕೊಂಡಿರುವುದು ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಅಲ್ನಾಜ್ @ ಮೊಹಮ್ಮದ್ ಅನಾಸ್, ಮಹಮ್ಮದ್ ಅಲ್ತಾಪ್, ಸ್ಟ್ಯಾನಿ ಸಂದೀಪ್, ಶಾಕೀಬ್, ಮಹಮ್ಮದ್ ಫೈಜಲ್, ಇಮ್ತಿಯಾಜ್, ಅಜಯ್ ಕುಮಾರ್, ಸಂತೋಷ್ ದೇವಾಡಿಗ ಅವರನ್ನು ಬಂಧಿಸಲಾಗಿದೆ.
ಆರೋಪಿಗಳಿಂದ 1354.28 ಗ್ರಾಂ (ಮೌಲ್ಯ ರೂ.67,714/-) ಗಾಂಜಾ, 32.74 ಗ್ರಾಂ (ಮೌಲ್ಯ ರೂ.1,30,960/-) ಮೆಥಾಂಫೆಟಮೈನ್, ಕಾರು ಸಂಖ್ಯೆ KA20-MH-0764 (ರೂ.6,00,000/-), ಕಾರು ಸಂಖ್ಯೆ KA-20-ME-9307 (ರೂ.4,00,000/-) ಹಾಗೂ ಸ್ಕೂಟರ್ ಸಂಖ್ಯೆ KA20-ET-5634 (ರೂ.25,000/-), 9 ಮೊಬೈಲ್ ಫೋನ್‌ಗಳು (ರೂ.93,300/-), 2 ತೂಕದ ಯಂತ್ರಗಳು (ರೂ.500/-) ಮತ್ತು ನಗದು 75,010 ರೂಪಾಯಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಅನಿಲ್ ತನಿಖೆ ಕೈಗೊಂಡಿದ್ದಾರೆ. ಆರೋಪಿಗಳು ಕೇರಳದ ಉಪ್ಪಳದಿಂದ ಗಾಂಜಾ ತರುತ್ತಿರುವುದಾಗಿ ತಿಳಿಸಿದ್ದು, ಇವರು ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.
ಸೆ.22 ರಂದು ಸಂಜೆ ಲಭಿಸಿದ ಖಚಿತ ಮಾಹಿತಿಯಂತೆ, ಉಡುಪಿ ನಗರ ಠಾಣಾ ಪಿಎಸ್‌ಐ ಭರತೇಶ್ ಕಂಕಣವಾಡಿ ಅವರು ಮೇಲಧಿಕಾರಿಗಳ ಅನುಮತಿ ಪಡೆದು, ಸೆ. 23ರ ಮಧ್ಯರಾತ್ರಿ ಶಿವಳ್ಳಿ ಗ್ರಾಮದ ವಾದಿರಾಜ ರಸ್ತೆಯ 3ನೇ ಅಡ್ಡರಸ್ತೆಯಲ್ಲಿರುವ ಮನೆಗೆ ದಾಳಿ ನಡೆಸಿದ್ದಾರೆ. ಮನೆಯಲ್ಲಿದ್ದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಣಗೋಡು ಮೂಲದ (ಹಾಲಿ ಉಡುಪಿಯ ಬಾಡಿಗೆ ಮನೆ ನಿವಾಸಿ) ಶ್ರೀವತ್ಸ ಕೆ.ಜಿ (31) ಎಂಬಾತನನ್ನು ಬಂಧಿಸಲಾಗಿದ್ದು, ಆತನಿಂದ 1 ಕೆಜಿ 659.91 ಗ್ರಾಂ ಗಾಂಜಾ (ಮೌಲ್ಯ ರೂ.83,000/-), ರೂ.1,26,500/- ನಗದು ಮತ್ತು ಡಿಜಿಟಲ್ ತೂಕದ ಸ್ಕೇಲ್ ಜಪ್ತಿ ಮಾಡಲಾಗಿದೆ.

ಶಿರ್ವ ಪ್ರಕರಣದ ಆರೋಪಿಗಳ ಅಪರಾಧ ಹಿನ್ನೆಲೆ : ಶಿರ್ವ ಪ್ರಕರಣದಲ್ಲಿ ಬಂಧಿತರಾದ ಹಲವರ ವಿರುದ್ಧ ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಹಳೆಯ ಪ್ರಕರಣಗಳು ದಾಖಲಾಗಿವೆ. ಆರೋಪಿ ಸ್ಟ್ಯಾನ್ಲಿ ಸಂದೀಪ್ ವಿರುದ್ಧ ಮಣಿಪಾಲ ಠಾಣೆಯಲ್ಲಿ 1 ಪ್ರಕರಣ, ಆರೋಪಿ ಮೊಹಮ್ಮದ್ ಫೈಜಲ್ ವಿರುದ್ಧ ಮಲ್ಪೆ, ಕಾರ್ಕಳ ಗ್ರಾಮಾಂತರ ಮತ್ತು ಮಣಿಪಾಲ ಠಾಣೆಗಳಲ್ಲಿ ತಲಾ 1 ರಂತೆ ಒಟ್ಟು 3 ಪ್ರಕರಣಗಳು, ಆರೋಪಿ ಇಮ್ತಿಯಾಜ್ ವಿರುದ್ಧ ಉಡುಪಿ ನಗರ (3), ಬ್ರಹ್ಮಾವರದಲ್ಲಿ ಕೊಲೆ ಪ್ರಕರಣ (1), ಮಲ್ಪೆ (1) ಮತ್ತು ಮಣಿಪಾಲ (3) ಸೇರಿ ಒಟ್ಟು 8 ಪ್ರಕರಣಗಳು, ಆರೋಪಿ ಅಜಯ್ ಕುಮಾರ್ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ದರೋಡೆ ಪ್ರಕರಣ ಸೇರಿದಂತೆ ಮಣಿಪಾಲ ಮತ್ತು ಶಿರ್ವ ಠಾಣೆಗಳಲ್ಲಿ ಒಟ್ಟು 3 ಪ್ರಕರಣಗಳು, ಆರೋಪಿ ಸಂತೋಷ್ ದೇವಾಡಿಗ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಗಾಂಜಾ ಸೇವನೆಗೆ ಸಂಬಂಧಿಸಿದಂತೆ 2 ಪ್ರಕರಣಗಳು ದಾಖಲಾಗಿರುತ್ತವೆ.
ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಪ್ರಕಾಶ್ ತನಿಖೆ ನಡೆಸುತ್ತಿದ್ದಾರೆ.
ಎಎಸ್‌ಪಿ ಈಶಿತಾ ಗುಪ್ತಾ ಮತ್ತು ಉಡುಪಿ ಉಪವಿಭಾಗದ ಡಿವೈಎಸ್‌ಪಿ ಬೆಳ್ಳಿಯಪ್ಪ ಅವರ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಪಿ. ಹಾಗೂ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ತಂಡದಲ್ಲಿದ್ದ ಪಿಎಸ್‌ಐಗಳಾದ ಅನಿಲ್, ಶುಭಕರ, ಭರತೇಶ್ ಕಂಕಣವಾಡಿ, ಪ್ರಕಾಶ್, ಎಎಸ್‌ಐಗಳಾದ ಸುದೇಶ್, ಸುಂದರಗೌಡ, ಸಿಬ್ಬಂದಿಗಳಾದ ಮಂಜುನಾಥ, ಹರ್ಷ, ಅರುಣ, ನಾಗರಾಜ, ಶರಣ, ಕಿಶೋರ, ಸೆನ್ ಠಾಣೆಯ ಪ್ರವೀಣ್, ದೀಕ್ಷಿತ್, ಮಣಿಪಾಲ ಠಾಣೆಯ ವಿಶ್ವಜಿತ್, ಉಡುಪಿ ನಗರ ಠಾಣೆಯ ಬಶೀರ್ ಅಹಮ್ಮದ್, ಆನಂದ ಗಾಣಿಗ ಹಾಗೂ ಸೊಕೊ (SOCO) ಅಧಿಕಾರಿಗಳು ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post