ಉಡುಪಿ: ಮಲಗಿದ್ದ ಕಾರ್ಮಿಕನ ಮೇಲೆ ಟಿಪ್ಪರ್ ಹರಿದ ಪರಿಣಾಮ ಕಾರ್ಮಿಕ ಸ್ಥಳದಲ್ಲೇ ಮೃತಪಟ್ಟ ಘಟನೆ ಹೆಬ್ರಿ ಸಮೀಪದ ಸೋಮೇಶ್ವರ ಪೆಟ್ರೋಲ್ ಬಂಕ್ ಆವರಣದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ. ಮೃತ ಕಾರ್ಮಿಕನನ್ನು ಸಾಗರ ತಾಲೂಕಿನ ಕೊರ್ಲಿ ಕೊಪ್ಪ ನಿವಾಸಿ ಶಿವರಾಜ್ ಎಂದು ಗುರುತಿಸಲಾಗಿದೆ. ಲಾರಿ ಕಾರ್ಮಿಕರಾಗಿದ್ದ ಇವರು ಪೆಟ್ರೋಲ್ ಬಂಕ್ ನಲ್ಲಿ ಮಲಗಿದ್ದರು.
ಇಂದು ಮುಂಜಾನೆ ಬಂಕ್ಗೆ ಇಂಧನ ತುಂಬಿಸಲು ಬಂದಿದ್ದ ಟಿಪ್ಪರ್ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಈ ದುರ್ಘಟನೆ ನಡೆದಿದೆ. ಶಿವರಾಜ್ ಹಾಗೂ ಮಹೇಂದ್ರ ಎಂಬವರು ಪೆಟ್ರೋಲ್ ಪಂಪ್ ಬಳಿ ತಮ್ಮ ವಾಹನವನ್ನು ಬದಿಗಿಟ್ಟು ಮಲಗಿದ್ದರು. ಈ ವೇಳೆ ಪೆಟ್ರೋಲ್ ಹಾಕಿಸಿ ನಿರ್ಗಮಿಸುತ್ತಿದ್ದ ಟಿಪ್ಪರ್ ಅವರ ಮೇಲೆ ಹರಿದಿದೆ.
ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Discussion about this post