ನವದೆಹಲಿ: ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA) ಹಾಗೂ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ನಡುವೆ ನಡೆದ ಸಭೆಯ ನಂತರ ಇಂದಿನಿಂದ (ಸೆ.28) ಸೆ. 30 ರವರೆಗೆ ನಡೆಯಬೇಕಿದ್ದ ಮೂರು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರವನ್ನು ಮುಂದೂಡಲಾಗಿದೆ. ಭಾನುವಾರ ರಾತ್ರಿ 9:30ಕ್ಕೆ IBA ಜೊತೆಗಿನ ಸಭೆಯ ನಂತರ ಸೆಪ್ಟೆಂಬರ್ 27 ರಂದು ಹೊರಡಿಸಲಾದ ಸುತ್ತೋಲೆಯಲ್ಲಿ UFBU ಈ ನಿರ್ಧಾರವನ್ನು ಪ್ರಕಟಿಸಿದೆ.
UFBU ಸುತ್ತೋಲೆಯ ಪ್ರಕಾರ ಉಳಿದ ಶನಿವಾರಗಳನ್ನು ರಜಾದಿನಗಳೆಂದು ಘೋಷಿಸುವ ಬೇಡಿಕೆಯನ್ನು ಚರ್ಚಿಸಲು ಮತ್ತು ಎಲ್ಲ ಪಾಲುದಾರರು ಹಾಗೂ ಗ್ರಾಹಕರಿಗೆ ಸ್ವೀಕಾರಾರ್ಹವಾದ ಪರಿಹಾರ ಕಂಡುಕೊಳ್ಳಲು ಪರ್ಯಾಯ ಮಾರ್ಗಗಳನ್ನು ಅನ್ವೇಷಿಸಲು IBA ಮತ್ತು UFBUಯ ಉನ್ನತ ಮಟ್ಟದ ಸಮಿತಿಯನ್ನು ತಕ್ಷಣವೇ ರಚಿಸಲಾಗುವುದು.
ಸ್ಕೇಲ್ IV ಮತ್ತು ಅದಕ್ಕಿಂತ ಮೇಲಿನ ಶ್ರೇಣಿಯ ಅಧಿಕಾರಿಗಳಿಗೆ ಅನ್ವಯಿಸುವ ‘ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕ’ (PLI) ಯೋಜನೆಯ ಕುರಿತು, ಸಂಘಗಳು ಮತ್ತು ಸಂಘಟನೆಗಳು ವ್ಯಕ್ತಪಡಿಸಿದ ಆಕ್ಷೇಪಣೆಗಳನ್ನು ಪರಿಹರಿಸಲು ಸರ್ಕಾರಕ್ಕೆ ತಿದ್ದುಪಡಿಗಳನ್ನು ಪ್ರಸ್ತಾಪಿಸುವ ಮೂಲಕ ಚರ್ಚೆಯನ್ನು ಪ್ರಾರಂಭಿಸಲು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ ಎಂದು ವರದಿಯಾಗಿದೆ.
ಮಾರ್ಚ್ 8, 2024ರ ಸಭೆಯ ನಡಾವಳಿಗಳಲ್ಲಿ ಉಲ್ಲೇಖಿಸಲಾದ ಬಾಕಿ ಉಳಿದಿರುವ ವಿಷಯಗಳನ್ನು ಸಹ ಶೀಘ್ರ ಪರಿಹಾರಕ್ಕಾಗಿ ಚರ್ಚೆಗೆ ತೆಗೆದುಕೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಮೇಲಿನ ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತಾಪಿಸಲಾದ ಪ್ರತಿಭಟನಾ ಕಾರ್ಯಕ್ರಮಗಳು ಮತ್ತು ಮುಷ್ಕರದ ಕ್ರಮಗಳನ್ನು ಮುಂದೂಡಲು UFBU ಒಪ್ಪಿಕೊಂಡಿದೆ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ. ಶುಕ್ರವಾರವಷ್ಟೇ UFBU ಮೂರು ದಿನಗಳ ರಾಷ್ಟ್ರವ್ಯಾಪಿ ಮುಷ್ಕರವನ್ನು ಘೋಷಿಸಿತ್ತು.
ಶಿಮ್ಲಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ UFBU ಹಿಮಾಚಲ ಪ್ರದೇಶದ ಸಂಚಾಲಕ ಮತ್ತು ‘ಬ್ಯಾಂಕರ್ಸ್ ಯುನೈಟೆಡ್ ಫೋರಮ್ ಆಫ್ ಹಿಮಾಚಲ ಪ್ರದೇಶ’ದ ಅಧ್ಯಕ್ಷ ನರೇಂದ್ರ ಶರ್ಮಾ, ಎರಡೂವರೆ ವರ್ಷಗಳ ಹಿಂದೆ ಸರ್ಕಾರದೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಭರವಸೆಗಳನ್ನು ಇನ್ನೂ ಜಾರಿಗೆ ತರದ ಕಾರಣ ಸಂಘಟನೆಗಳು ಪ್ರತಿಭಟನೆಯ ಹಾದಿ ಹಿಡಿಯಬೇಕಾಯಿತು ಎಂದು ತಿಳಿಸಿದ್ದರು.
ಶನಿವಾರ ಮತ್ತು ಭಾನುವಾರವನ್ನು ಸಾಪ್ತಾಹಿಕ ರಜಾದಿನಗಳನ್ನಾಗಿ ಮಾಡಿ, ವಾರದಲ್ಲಿ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾರಿಗೆ ತರುವುದು ನಮ್ಮ ಮುಖ್ಯ ಬೇಡಿಕೆಯಾಗಿದೆ. ಎರಡನೇ ಪ್ರಮುಖ ವಿಷಯವೆಂದರೆ, ಹಣಕಾಸು ಸೇವೆಗಳ ಇಲಾಖೆಯು ಏಕಪಕ್ಷೀಯವಾಗಿ ಜಾರಿಗೆ ತಂದಿರುವ ಹೊಸ ‘ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕ’ (PLI) ಯೋಜನೆಯನ್ನು ಹಿಂಪಡೆಯುವುದು. ಒಪ್ಪಂದಕ್ಕೆ ಸಹಿ ಹಾಕಿ ಎರಡೂವರೆ ವರ್ಷಗಳಿಗೂ ಹೆಚ್ಚು ಸಮಯ ಕಳೆದಿದೆ. ಆದರೆ, ಆ ಸಂದರ್ಭದಲ್ಲಿ ನೀಡಲಾಗಿದ್ದ ಭರವಸೆಗಳನ್ನು ಇನ್ನೂ ಜಾರಿಗೆ ತಂದಿಲ್ಲ. ಆದ್ದರಿಂದ, ಪ್ರತಿಭಟನೆ ಮಾಡುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ ಎಂದು ಶರ್ಮಾ ಹೇಳಿದ್ದರು.
ಗ್ರಾಹಕರಿಗೆ ಅನಾನುಕೂಲ ಉಂಟುಮಾಡುವ ಯಾವುದೇ ಉದ್ದೇಶ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳಿಗೆ ಇಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ನಿರಂತರ ಬ್ಯಾಂಕಿಂಗ್ ಸೇವೆಗಳ ಮಹತ್ವ ಹಾಗೂ ಮುಷ್ಕರದ ಸಂದರ್ಭದಲ್ಲಿ ಗ್ರಾಹಕರು ಎದುರಿಸಬಹುದಾದ ತೊಂದರೆಗಳನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಆದಾಗ್ಯೂ ನಮ್ಮ ನ್ಯಾಯಯುತ ಬೇಡಿಕೆಗಳು ಮತ್ತು ಒಪ್ಪಂದದನ್ವಯ ನೀಡಲಾದ ಭರವಸೆಗಳು ದೀರ್ಘಕಾಲದವರೆಗೆ ಬಾಕಿ ಉಳಿದಿರುವಾಗ ಸರ್ಕಾರದ ಗಮನ ಸೆಳೆಯಲು ನಾವು ಪ್ರತಿಭಟನೆಯ ಹಾದಿಯನ್ನು ತುಳಿಯುವುದು ಅನಿವಾರ್ಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದರು.
Discover more from Coastal Times Kannada
Subscribe to get the latest posts sent to your email.







Discussion about this post