ಮಂಗಳೂರು: ತಾಯಿಯನ್ನು ಕಳೆದುಕೊಂಡು ಅನಾಥವಾಗುವ ನವಜಾತ ಶಿಶುಗಳು, ಅವಧಿಪೂರ್ವ ಜನಿಸುವ ಮಗುವಿಗೆ ಹಾಲು ನೀಡಲು, ನಗರದ ಸರ್ಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ಎದೆಹಾಲು ಸಂಗ್ರಹ ಬ್ಯಾಂಕ್ ಪ್ರಾರಂಭಕ್ಕೆ ಸಿದ್ಧತೆ ನಡೆಯುತ್ತಿದೆ.
ಬಡವರ ಪಾಲಿಗೆ ಆಶಾಕಿರಣವಾಗಿರುವ ಈ ಸರ್ಕಾರಿ ಆಸ್ಪತ್ರೆಯು ಸಕಲ ಸೌಲಭ್ಯಗಳನ್ನು ಹೊಂದಿದೆ. ಇಲ್ಲಿ ತಿಂಗಳಿಗೆ 700ಕ್ಕೂ ಅಧಿಕ ಹೆರಿಗೆಗಳಾಗುತ್ತವೆ. ಈ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಸಹಯೋಗದಲ್ಲಿ ಅಂದಾಜು ₹ 45 ಲಕ್ಷ ವೆಚ್ಚದಲ್ಲಿ ಯಂತ್ರೋಪಕರಣಗಳನ್ನು ಅಳವಡಿಸಿ, ಎದೆಹಾಲು ಸಂಗ್ರಹ ಬ್ಯಾಂಕ್ ತೆರೆಯುವ ತಯಾರಿ ನಡೆದಿದೆ. ಅವಧಿ ಪೂರ್ವ ಜನಿಸಿದ, ತಾಯಿಯನ್ನು ಕಳೆದುಕೊಂಡ ಹಸುಳೆಗಳಿಗೆ ಈ ಬ್ಯಾಂಕ್ ವರದಾನವಾಗಲಿದೆ.
‘ಜಿಲ್ಲೆಯ ವಿವಿಧೆಡೆಗಳಿಂದ ಲೇಡಿಗೋಶನ್ ಆಸ್ಪತ್ರೆಗೆ ಗರ್ಭಿಣಿಯರು ಹೆರಿಗೆಗೆ ಬರುತ್ತಾರೆ. ಆರ್ಥಿಕ ಮುಗ್ಗಟ್ಟಿನ ಕುಟುಂಬದ ಕೆಲವರು ಪೌಷ್ಟಿಕತೆ ಕೊರತೆಯಿಂದ ಬಳಲುತ್ತಿರುತ್ತಾರೆ. ಅಂತಹ ತಾಯಂದಿರಲ್ಲಿ ಎದೆಹಾಲಿನ ಕೊರತೆ ಕಾಡುತ್ತದೆ. ಅಂತಹ ಮಹಿಳೆಗೆ ಹುಟ್ಟುವ ಮಗುವಿಗೆ ಈ ಬ್ಯಾಂಕ್ ಮೂಲಕ ಎದೆಹಾಲು ನೀಡಬಹುದು. ತಾಯಂದಿರು ಎದೆಹಾಲನ್ನು ದಾನವಾಗಿ ನೀಡಿದರೆ, ಅದನ್ನು ಸರಿಯಾಗಿ ಸಂಗ್ರಹಿಸಿ, ಅಗತ್ಯವಿರುವ ಎಳೆಯ ಮಗುವಿಗೆ ನೀಡಲಾಗುತ್ತದೆ’ ಎನ್ನುತ್ತಾರೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಂ.ಆರ್. ದುರ್ಗಾಪ್ರಸಾದ್.
‘ತಾಯಿಯ ಎದೆಹಾಲಿನಲ್ಲಿ ಲವಣಾಂಶ, ಪ್ರೊಟೀನ್, ಶರ್ಕರಪಿಷ್ಠ, ಪ್ರತಿರೋಧಕ ಶಕ್ತಿ ಹೆಚ್ಚಿಸುವ ಜೀವಕಣ ಇರುತ್ತದೆ. ಇದು ಅವಧಿಪೂರ್ವ ಜನಿಸುವ ಮಗು, ತಾಯಿಯನ್ನು ಕಳೆದುಕೊಂಡ ಮಗುವನ್ನು ಉಳಿಸಿಕೊಳ್ಳಲು ಅನುಕೂಲವಾಗುತ್ತದೆ. ಎದೆಹಾಲು ದಾನ ನೀಡುವ ತಾಯಂದಿರಿಂದ ಹಾಲು ಸಂಗ್ರಹಿಸಿ, ಶಿತಲೀಕರಣ ಪ್ರಕ್ರಿಯೆ ಮಾಡಿ, ಕಾಯ್ದಿಡಲಾಗುತ್ತದೆ’ ಎಂದು ಉದ್ದೇಶಿತ ಬ್ಯಾಂಕ್‌ನ ನೋಡಲ್ ಅಧಿಕಾರಿ ಡಾ. ಬಾಲಕೃಷ್ಣ ರಾವ್ ಹೇಳಿದರು.
‘ಎದೆಹಾಲು ಹೆಚ್ಚು ಇರುವ ಬಾಣಂತಿಯರು, ದಾನಿಗಳು ಎದೆಹಾಲು ಸಂಗ್ರಹ ಬ್ಯಾಂಕ್‌ಗೆ ಎದೆಹಾಲು ನೀಡಿದರೆ, ಅವಧಿಪೂರ್ವ ಜನಿಸಿದ ಮಗುವಿಗೆ ಇದನ್ನು ನೀಡಬಹುದು. ಇದರಿಂದ ಮಗುವನ್ನು ಬದುಕಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ’ ಎನ್ನುತ್ತಾರೆ ವೈದ್ಯರು.