ಮಂಗಳೂರು: “ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಗೆ ಅಧಿಕೃತ ಭಾಷೆಯ ಸ್ಥಾನವನ್ನು ನೀಡುವ ಮೂಲಕ 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂದು ಆಗ್ರಹಿಸಿ ಹಲವಾರು ವರ್ಷಗಳಿಂದ ವಿವಿಧ ಹೋರಾಟಗಳು ನಿರಂತರವಾಗಿ ನಡೆಯುತ್ತಾ ಬಂದಿದೆ. ಮೊದಲಿನಿಂದಲೂ ತುಳುನಾಡು ಹಾಗೂ ತುಳು ಭಾಷೆಯ ಕುರಿತಂತೆ ನಿರಂತರವಾಗಿ ಅನ್ಯಾಯಗಳು ನಡೆಯುತ್ತಿವೆ, ಈ ಕುರಿತಂತೆ ನಾವು ಧ್ವನಿ ಎತ್ತಿದಾಗ ಕಾನೂನಿನ ತೊಡಕು ಎಂಬ ಕಾರಣವನ್ನು ನೀಡಿ ಸರ್ಕಾರಗಳು ಜನರ ಭಾವನೆಗಳನ್ನು ಗೌರವಿಸದೇ ಇರುವುದು ದುರ್ದೈವದ ಸಂಗತಿ. ಈ ಕುರಿತು ತುಳುನಾಡಿನ ಜವಾಬ್ದಾರಿಯುತ ಪ್ರಜೆಗಳಾದ ನಾವು ಪಕ್ಷ ಭೇದ, ಜಾತಿ ಧರ್ಮ ಮರೆತು ಒಂದಾಗಿ ಸರಕಾರದ ಗಮನ ಸೆಳೆಯುವ ಅಗತ್ಯವಿದೆ” ಎಂದು ಮಾಜಿ ಶಾಸಕ ಬಿ.ಎ. ಮೊಯಿದೀನ್ ಬಾವಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
“ಈಗಾಗಲೇ ಹಲವು ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಅಧಿಕೃತ ಭಾಷೆಯನ್ನಾಗಿ ಮಾಡಿರುವುದು ನಮ್ಮ ಕಣ್ಣ ಮುಂದಿದೆ, ಆಂಧ್ರಪ್ರದೇಶ, ತಲಂಗಾಣ, ಜಾರ್ಖಂಡ್, ಉತ್ತರಾಖಂಡ್ ರಾಜ್ಯದಲ್ಲಿ ಒಂದಕ್ಕಿಂತ ಹೆಚ್ಚಿನ ಭಾಷೆಗಳು ಅಧಿಕೃತ ಸ್ಥಾನ ಪಡೆದಿದೆ. ಹೀಗಾಗಿ ಜನವರಿ 29 ರಿಂದ ಫೆಬ್ರವರಿ 2ರವರೆಗೆ ಜವಾಬ್ದಾರಿಯುತ ಪ್ರಜೆಗಳಾದ ನಾವುಗಳು ಪತ್ರ ಅಭಿಯಾನದ ಮೂಲಕ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂಡಿಯನ್ ಪೋಸ್ಟ್ ರೆಜಿಸ್ಟರ್ಡ್ ಪೋಸ್ಟ್ ಮುಖಾಂತರ ಗೌರವದಿಂದ ಮನವಿ ಪತ್ರಗಳನ್ನು ಬರೆಯುವ ಮೂಲಕ ಕೂಡಲೇ ತುಳು ಭಾಷೆಯನ್ನು ಅಧಿಕೃತ ಭಾಷೆಯನ್ನಾಗಿಸಿ ಸರ್ಕಾರದ ಆದೇಶ ಹೊರಡಿಸಬೇಕೆಂದು ಆಗ್ರಹಿಸಬೇಕಿದೆ” ಎಂದರು.
ಬಳಿಕ ಮಾತಾಡಿದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರು, “ಈ ಅಭಿಯಾನಕ್ಕೆ ತುಳುನಾಡಿನ ಎಲ್ಲಾ ಸಂಘಗಳು, ರಾಜಕೀಯ ಪಕ್ಷಗಳ ನಾಯಕರು ಮತ್ತು ಕಾರ್ಯಕರ್ತರುಗಳು, ತುಳು ರಂಗಭೂಮಿ ಮತ್ತು ತುಳು ಚಿತ್ರರಂಗದ ಎಲ್ಲಾ ಕಲಾವಿದರು ಹಾಗೂ ಪ್ರಮುಖರು, ತುಳುನಾಡಿನ ಎಲ್ಲಾ ವ್ಯಾಪಾರಿಗಳು, ಉದ್ಯಮಿಗಳು ಬೆಂಬಲ ನೀಡಬೇಕಿದೆ. ಕನ್ನಡ ಭಾಷೆಯ ಸೋದರ ಭಾಷೆಯಾದ ತುಳು ಭಾಷೆ ಕುರಿತು ಧ್ವನಿ ಎತ್ತುವ ಮೂಲಕ ಈ ಅಭಿಯಾನಕ್ಕೆ ಬೆಂಬಲಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಎಲ್ಲಾ ಸಂಘಟನೆಯವರಿಗೂ ಸಹ ಈ ಕುರಿತಂತೆ ಮನವಿ ಮಾಡಿಕೊಳ್ಳುತ್ತೇನೆ” ಎಂದರು.
“ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆ ಹಾಗೂ ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಶಿವಮೊಗ್ಗದ ತೀರ್ಥಹಳ್ಳಿ, ಹೊಸನಗರ, ಸಾಗರ ತಾಲೂಕುಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ ನರಸಿಂಹರಾಜಪುರ, ಮೂಡಿಗೆರೆ, ಹಾಸನ ಜಿಲ್ಲೆಯ ಸಕಲೇಶಪುರ ಸೇರಿದಂತೆ ಕರ್ನಾಟಕ ರಾಜ್ಯದ ವಿವಿಧ ಭಾಗಗಳಲ್ಲಿ ವ್ಯಾಪಾರ ಉದ್ಯೋಗ ನಡೆಸುತ್ತಿರುವ ಹಾಗೂ ಬೆಂಗಳೂರು ಮುಂಬೈ ಪುಣೆ ಹಾಗೂ ದೇಶ ವಿದೇಶಗಳಲ್ಲಿ ಸುಮಾರು 25 ಲಕ್ಷ ತುಳು ಭಾಷೆ ಮಾತನಾಡುವ ಜನರು ವಾಸಿಸುತ್ತಿದ್ದು ಇವರೆಲ್ಲರೂ ಈ ಅಭಿಯಾನದ ನೇತೃತ್ವ ವಹಿಸಿ ಭಾಗವಹಿಸುವ ಮೂಲಕ ಕನಿಷ್ಠ 10 ಸಾವಿರ ಮನವಿ ಪತ್ರವನ್ನು ಪ್ರಧಾನಿ ಹಾಗೂ ಮುಖ್ಯಮಂತ್ರಿಯವರಿಗೆ ಕಳುಹಿಸಿ ಸರ್ಕಾರಕ್ಕೆ ಒತ್ತಡ ಹೇರುವ ಮೂಲಕ ಬರುವ ಫೆಬ್ರವರಿ ತಿಂಗಳಲ್ಲಿ ನಡೆಯುವ ಬಜೆಟ್ ಅಧಿವೇಶನದ ಒಳಗಾಗಿ ಈ ಕುರಿತು ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಮೂಲಕ ಸಂವಿಧಾನದ ಆರ್ಟಿಕಲ್ 29ರಲ್ಲಿ ತಿಳಿಸಿರುವಂತೆ ಲಿಪಿ ಹೊಂದಿರುವ ಭಾಷೆಯನ್ನು ಉಳಿಸಿ ಬೆಳೆಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂಬುದನ್ನು ಪರಿಗಣಿಸಬೇಕಿದೆ” ಎಂದವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ದಯಾನಂದ ಕತ್ತಲ್ ಸಾರ್, ಹಿರಿಯ ರಂಗಕರ್ಮಿ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಹೆಚ್.ಕೆ. ಷರೀಫ್, ಶೈಲೇಶ್ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post