ಮಂಗಳೂರು: ಸಾಮಾಜಿಕ ಜಾಲಾತಾಣಗಳಲ್ಲಿ ನೇಮ ಕಟ್ಟುವ ಸಮುದಾಯದ ಸಮುದಾಯದ ವಿರುದ್ಧ ತಪ್ಪು ಸಂದೇಶ ನೀಡುತ್ತಿರುವ ಮತ್ತು ಅಶ್ಲೀಲವಾಗಿ ನಿಂದಿಸುತ್ತಿರುವವರ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸುವಂತೆ ಪಂಬದರ ಯಾನೆ ದೈವಾದಿಗರ ಸಮಾಜ ಸಂಘ(ರಿ) ದ.ಕ.ಜಿಲ್ಲಾಧಿಕಾರಿ ಮಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದೆ.
ಸಂಘದ ಮಾಜಿ ಅಧ್ಯಕ್ಷ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮಾಜಿ ಅಧ್ಯಕ್ಷ ದಯಾನಂದ ಕತ್ತಲಸಾರ್ ನೇತೃತ್ವದ ನಿಯೋಗವು ದ.ಕ. ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್ ಅವರಿಗೆ ಮಂಗಳವಾರ ಮನವಿ ಸಲ್ಲಿಸಿ ಆಗ್ರಹಿಸಿದೆ.
ಇತ್ತೀಚೆಗೆ ಕಲ್ಜಿಗ ಎನ್ನುವ ಕನ್ನಡ ಸಿನಿಮಾದಲ್ಲಿ ದೈವದ ಪಾತ್ರವನ್ನು ಅನ್ಯರು ಮಾಡಿ, ಆರಾಧನಾ ಪದ್ಧತಿಗೆ ಅಪಚಾರ ಎಸಗಿದ್ದಾರೆ. ಇದಲ್ಲದೆ, ಈ ಸಿನಿಮಾದ ಸುದ್ದಿಗೋಷ್ಟಿಯಲ್ಲಿ ದೈವಾರಾಧಕರನ್ನು ವ್ಯಕ್ತಿಯೊಬ್ಬರು ತುಚ್ಛವಾಗಿ ನಿಂದಿಸಿ ಮಾತನಾಡಿದ್ದಾರೆ. ಇದನ್ನು ನಾವು ಸಹಿಸುವುದಿಲ್ಲ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ದೂರು ನೀಡಿದ್ದೇವೆ. ನಾಟಕ, ಸಿನಿಮಾದಲ್ಲಿ ತೋರಿಸುವ ಮೂಲಕ ದೈವ ನರ್ತನ ಸೇವೆ ಮಾಡುವ ಸಮುದಾಯದವರ ವಿರುದ್ಧ ತಪ್ಪು ಸಂದೇಶ ನೀಡುತ್ತಿದ್ದಾರೆ. ಇದನ್ನು ಮುಂದುವರಿಸದಂತೆ ತಡೆ ಹೇರುವಂತೆ ಜಿಲ್ಲಾಧಿಕಾರಿಗೆ ಆಗ್ರಹ ಮಾಡಿದ್ದೇವೆ ಎಂದು ದೈವಾರಾಧಕರು ಹೇಳಿದ್ದಾರೆ.
ದೈವಾರಾಧನೆ ಮತ್ತು ದೈವದ ಪಾತ್ರ ಮಾಡುವ ಹಿಂದುಳಿದ ವರ್ಗದ ಜನಾಂಗವನ್ನು ನಿಂದಿಸಿರುವವರ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕೆಂದು ಸಂಘದ ಸದಸ್ಯರು ಒತ್ತಾಯಿಸಿದ್ದಾರೆ. ನಿಯೋಗದಲ್ಲಿ ಸಂಘದ ಅಧ್ಯಕ್ಷ ಪುರುಷೋತ್ತಮ ಗೋಳಿಪಲ್ಕೆ, ಕಾರ್ಯದರ್ಶಿ ಕಿರಣ್ ಕುಮಾರ್, ಮಾಜಿ ಅಧ್ಯಕ್ಷ ಕಮಲಾಕ್ಷ ಗಂಧಕಾಡು, ಸಂಘದ ಧುರೀಣರಾದ ಮುಖೇಶ್ ಗಂಧಕಾಡು, ಕುಮಾರ ಪಂಬದ ಮೈಲೊಟ್ಟು, ಲಕ್ಷ್ಮಣ್ ಸಾಲ್ಯಾನ್ ಮತ್ತು ನಿಕಿಲ್ ಸಾಲ್ಯಾನ್ ಇದ್ದರು.
Discover more from Coastal Times Kannada
Subscribe to get the latest posts sent to your email.
Discussion about this post