ಮಂಗಳೂರು: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಭಾರತೀಯ ಶಿಕ್ಷಣ ಪದ್ಧತಿಯನ್ನು ಅಂತಾರಾಷ್ಟ್ರೀಯ ಶಿಕ್ಷಣ ಪದ್ಧತಿಯ ಮಟ್ಟಕ್ಕೇರಿಸುತ್ತದೆ. ಇದು ಅತ್ಯುತ್ತಮ ಶಿಕ್ಷಣ ಪದ್ಧತಿಗಳ ಸಮ್ಮಿಶ್ರಣ. ಈ ಪದ್ಧತಿ ವಿದ್ಯಾರ್ಥಿಗಳಲ್ಲಿ ವಿಮರ್ಶೆ, ಸಮಸ್ಯೆ ಪರಿಹಾರದಂತಹ ಕೌಶಲ ಬೆಳೆಸುತ್ತದೆ ಮತ್ತು ಅವರಿಗೆ ಉದ್ಯೋಗಾವಕಾಶ ಹೆಚ್ಚಿಸುತ್ತದೆ ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಗೋಪಾಲಕೃಷ್ಣ ಜೋಶಿ ಹೇಳಿದರು.
ನೂತನ ರಾಷ್ಟ್ರೀಯ ಶಿಕ್ಷಣ ಪದ್ಧತಿ ಕುರಿತು ಮಂಗಳೂರು ವಿವಿ ಪುರಭವದಲ್ಲಿ ಸೋಮವಾರ ಆಯೋಜಿಸಿದ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಕರು ತಮಗೆ ತಿಳಿದದ್ದನ್ನು ಕಲಿಸುವ ಬದಲು ವಿದ್ಯಾರ್ಥಿಗಳ ಅಗತ್ಯತೆಗೆ ಅನುಗುಣವಾಗಿ ಶಿಕ್ಷಣ ನೀಡುವುದೇ ಈ ಫಲಿತಾಂಶ ಆಧಾರಿತ ಶಿಕ್ಷಣ ಪದ್ಧತಿಯ ಮೂಲ ಆಶಯ. ಜಾಗತಿಕ ಅಗತ್ಯ, ಜ್ಞಾನ, ಕೌಶಲಗಳನ್ನು ವಿದ್ಯಾರ್ಥಿಗಳಲ್ಲಿ ತುಂಬುವುದು ಹಾಗೂ ಶಿಕ್ಷಣದ ಎಲ್ಲ ಹಂತಗಳಲ್ಲಿ ತಂತ್ರಜ್ಞಾನವನ್ನು ಸಂಯೋಜಿಸುವ ಗುರಿಯನ್ನು ಹೊಸ ನೀತಿ ಹೊಂದಿದೆ.
ಮಂಗಳೂರು -ವಿಶ್ವವಿದ್ಯಾನಿಲಯದ ವಿಜ್ಞಾನ ಮತ್ತು ತಂತ್ರಜ್ಞಾನ ನಿಖಾಯದ ಡೀನ್ ಡಾ.ಮಂಜುನಾಥ ಪಟ್ಟಾಭಿ, ಶಿಕ್ಷಕರು ಈ ಪದ್ಧತಿ ಅರಿತು ಹೊಸ ಪೀಳಿಗೆಯ ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸುವುದು ಮುಖ್ಯ ಎಂದರು.
ಕುಲಸಚಿವ ಡಾ.ಕಿಶೋರ್ ಕುಮಾರ್ ಸ್ವಾಗತಿಸಿದರು. ಕುಲಸಚಿವ(ಪರೀಕ್ಷಾಂಗ) ಡಾ.ಪಿ.ಎಲ್.ಧರ್ಮ, ಸಿಡಿಸಿ ಮುಖ್ಯಸ್ಥ ಪ್ರೊ. ರವೀಂದ್ರ ಆಚಾರಿ ಉಪಸ್ಥಿತರಿದ್ದರು. ಇಂಗ್ಲಿಷ್ ವಿಭಾಗ ಮುಖ್ಯಸ್ಥ ಡಾ.ರವಿಶಂಕರ್ ರಾವ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿವಿಧ ಸ್ವಾಯತ್ತ ಕಾಲೇಜುಗಳ ಪ್ರಾಂಶುಪಾಲರುಗಳು, ಪ್ರತಿನಿಧಿಗಳ ಪ್ರತ್ಯೇಕ ಸಭೆ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ.ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ಮುಂದಿನ ದಿನಗಳಲ್ಲಿ ವಿವಿಧ ಕಾಲೇಜುಗಳಲ್ಲಿ ಕ್ಲಸ್ಟರ್ ಮಾದರಿಯಲ್ಲಿ ಎನ್‌ಇಪಿ ಕುರಿತು ಕಾರ್ಯಾಗಾರಗಳು ನಡೆಯಲಿವೆ. ಎನ್‌ಇಪಿಯಲ್ಲಿ ಇಂಗ್ಲಿಷ್ ಸಹಿತ ಯಾವ ಭಾಷೆಯನ್ನೂ ಕಡೆಗಣಿಸಲಾಗಿಲ್ಲ. ಶಿಕ್ಷಕರಿಗೂ ಪ್ರಾಧಾನ್ಯತೆಯಿದೆ. ಆದರೆ ಉಪನ್ಯಾಸಕರ ಕಾರ್ಯಭಾರಕ್ಕಾಗಿ ವಿದ್ಯಾರ್ಥಿಗಳ ಹಿತವನ್ನು ಕಡೆಗಣಿಸಲು ಸಾಧ್ಯವಿಲ್ಲ. ಖಾಲಿ ಇರುವ ಹುದ್ದೆಗಳನ್ನು ಶೀಘ್ರದಲ್ಲೇ ನೇಮಕಾತಿ ನಡೆಯಲಿದೆ ಎಂದರು.
Discover more from Coastal Times Kannada
Subscribe to get the latest posts sent to your email.
Discussion about this post