ಮಂಗಳೂರು: ಸುರತ್ಕಲ್ ಠಾಣೆ ವ್ಯಾಪ್ತಿಯ ಕೃಷ್ಣಾಪುರದಲ್ಲಿ ವರ್ತಕ ಜಲೀಲ್ ಅವರನ್ನು ಶನಿವಾರ ರಾತ್ರಿ ಹತ್ಯೆ ಮಾಡಲಾಗಿದ್ದು, ಇದರ ಬೆನ್ನಲ್ಲೇ ಕಾನೂನು ವ್ಯವಸ್ಥೆಗೆ ಧಕ್ಕೆ ತರುವಂತಹ ಅಹಿತಕರ ಘಟನೆ ನಡೆಯುವುದನ್ನು ತಡೆಯುವ ಸಲುವಾಗಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ನಾಲ್ಕು ಠಾಣೆಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬಜಪೆ, ಸುರತ್ಕಲ್, ಕಾವೂರು, ಪಣಂಬೂರು ಠಾಣೆಗಳ ವ್ಯಾಪ್ತಿಯಲ್ಲಿ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 144ರ ಅಡಿ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು ಆದೇಶ ಮಾಡಿದ್ದಾರೆ.


ಭಾನುವಾರ ಬೆಳಿಗ್ಗೆ 6ರಿಂದ ಇದೇ 27ರಂದು ಬೆಳಿಗ್ಗೆ 6ರ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ನಾಲ್ಕು ಠಾಣೆಗಳ ವ್ಯಾಪ್ತಿಯಲ್ಲಿ ಮದ್ಯದಂಗಡಿಗಳನ್ನೂ ಬಂದ್ ಮಾಡಲಾಗಿದೆ. ರಾತ್ರಿ ವೇಳೆ ಜನಸಂಚಾರ ನಿರ್ಬಂಧಿಸುವ ಉದ್ದೇಶದಿಂದ ಕೈಗಾರಿಕೆ, ವಾಣಿಜ್ಯ ಸಂಕೀರ್ಣಗಳಲ್ಲಿ ರಾತ್ರಿ ಪಾಳಿಯನ್ನು ಕಡಿತಕ್ಕೆ ಸೂಚನೆ ನೀಡಲಾಗಿದೆ. ಸುರತ್ಕಲ್, ಪಣಂಬೂರು, ಕಾವೂರು, ಬಜ್ಪೆ ವ್ಯಾಪ್ತಿಯ ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಕೀರ್ಣಗಳಲ್ಲಿ ರಾತ್ರಿ ವೇಳೆ ಕರ್ತವ್ಯ ನಡೆಸದೆ, ಸಂಜೆ ಆರು ಗಂಟೆ ವೇಳೆಗೆ ಕರ್ತವ್ಯ ಮುಗಿಸಿ ಮನೆ ಸೇರುವಂತೆ ಅವಕಾಶ ನೀಡಬೇಕು. ಕರ್ತವ್ಯದ ಅವಧಿ ಬೆಳಗ್ಗಿನಿಂದ ಸಂಜೆ 6 ಗಂಟೆಗೆ ಕೊನೆಗೊಳಿಸುವಂತೆ ಪೊಲೀಸ್ ಕಮಿಷನರ್ ಆದೇಶ ಮಾಡಿದ್ದಾರೆ.

ಜಲೀಲ್ ಅವರು ಕೃಷ್ಣಾಪುರದಲ್ಲಿ ಹೊಂದಿದ್ದ ಅಂಗಡಿಗೆ ನುಗ್ಗಿದ್ದ ಇಬ್ಬರು ಮುಸುಕುಧಾರಿ ದುಷ್ಕರ್ಮಿಗಳು ಶನಿವಾರ ರಾತ್ರಿ ಅವರಿಗೆ ಚೂರಿಯಿಂದ ಇರಿದಿದ್ದರು. ತಕ್ಷಣವೇ ಅಕ್ಕ ಪಕ್ಕದ ಅಂಗಡಿಯವರು ಹಾಗೂ ಸ್ಥಳೀಯರು ಸೇರಿ ಗಾಯಾಳು ಜಲೀಲ್ ಅವರನ್ನು ಮುಕ್ಕದ ಶ್ರೀನಿವಾಸ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದರು. ಅದಾಗಲೇ ಅವರು ರಕ್ತಸ್ರಾವದಿಂದ ಕೊನೆಯುಸಿರೆಳೆದಿದ್ದರು. ಸುರತ್ಕಲ್ ಕೋಮು ಸೂಕ್ಷ್ಮ ಪ್ರದೇಶವಾಗಿದ್ದು ಈ ಹಿಂದೆಯೂ ಇಲ್ಲಿ ಸಾಕಷ್ಟು ಕೋಮುಗಲಭೆಗಳು ನಡೆದ ಇತಿಹಾಸ ಇದೆ. ಹೀಗಾಗಿ ಹೆಚ್ಚಿನ ಭದ್ರತೆಯನ್ನು ಅಲ್ಲಿ ನಿಯೋಜಿಸಲಾಗಿದೆ.
Discover more from Coastal Times Kannada
Subscribe to get the latest posts sent to your email.








Discussion about this post