ಉಡುಪಿ, ಜ 26: ಇಲ್ಲಿನ ಮಹಿಳಾ ಸರ್ಕಾರಿ ಕಾಲೇಜಿನ ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಮುಖಂಡರು ಸಭೆ ನಡೆಸಿದ್ದಾರೆ. ಇನ್ನೊಂದೆಡೆ ಈ ವಿವಾದ ಕುರಿತಂತೆ ಉಡುಪಿ ಶಾಸಕ ರಘುಪತಿ ಭಟ್ ತಮ್ಮ ಪ್ರತಿಕ್ರಿಯೆ ನೀಡಿದ್ದು, ಹಿಜಾಬ್ ಬೇಕೆನ್ನುವವರಿಗೆ ಸೂಕ್ತ ವ್ಯವಸ್ಥೆ ಮಾಡಲಾಗುವುದು, ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ.
ಉಡುಪಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸ್ಕಾರ್ಫ್ ವಿಚಾರವಾಗಿ ಸರಕಾರ ಯಥಾಸ್ಥಿತಿ ಕಾಪಾಡುವಂತೆ ಹೊರಡಿಸಿದ ಆದೇಶ ಸಂಬಂಧ ಮಂಗಳವಾರ ಕಾಲೇಜು ಅಭಿವೃದ್ಧಿ ಸಮಿತಿ ನಡೆಸಿದ ಸಭೆಯ ಬಳಿಕ ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ. ಬಾವ ನೇತೃತ್ವದಲ್ಲಿ ಮುಸ್ಲಿಮ್ ಮುಖಂಡರು ಭೇಟಿ ಮಾಡಿ ಚರ್ಚಿಸಿದ್ದರು. ಆ ಬಳಿಕ ಕಾಲೇಜು ಅಭಿವೃದ್ಧಿ ಸಮಿತಿ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದರು.
ಸ್ಕಾರ್ಫ್ ಹಾಕಲು ಒಂದು ಕಾಲೇಜಿನಲ್ಲಿ ಅವಕಾಶ ನೀಡಿದರೆ ಮುಂದೆ ಎಲ್ಲ ಕಾಲೇಜಿನಲ್ಲಿ ಇದು ಆರಂಭವಾಗುತ್ತದೆ. ಬಳಿಕ ಇದಕ್ಕೆ ಪ್ರತಿರೋಧವಾಗಿ ಕೇಸರಿ ಶಾಲು, ಕೇಸರಿ ಪೇಟ ಧರಿಸಿಕೊಂಡು ಬರುವ ವಿವಾದವೂ ಎದುರಾಗುತ್ತದೆ. ಜಿಲ್ಲೆಯ ಕೋಮು ಸೌಹಾರ್ದತೆಕ್ಕೆ ಈ ಸಣ್ಣ ವಿಚಾರದಿಂದ ಧಕ್ಕೆಯಾಗದಂತೆ ಮುಖಂಡರಿಗೆ ಮನವಿ ಮಾಡಿದ್ದೇವೆ. ಅವರು ಪೋಷಕರೊಂದಿಗೆ ಮಾತನಾಡಿ ಎರಡು ದಿನಗಳಲ್ಲಿ ಮತ್ತೆ ನಮ್ಮನ್ನು ಭೇಟಿಯಾಗುವುದಾಗಿ ಹೇಳಿದ್ದಾರೆ ಎಂದು ರಘುಪತಿ ಭಟ್ ತಿಳಿಸಿದರು.
ವಿದ್ಯಾರ್ಥಿನಿಯರಿಗೆ ಆನ್ ಲೈನ್ ಕ್ಲಾಸ್ :
ಹಿಜಾಬ್ ಬೇಕೆನ್ನುವ ಆರು ವಿದ್ಯಾರ್ಥಿನಿಯರಿಗೆ ಆನ್‌ಲೈನ್ ಕ್ಲಾಸ್ ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು, ಒಂದು ತಿಂಗಳು ಆನ್ ಲೈನ್ ತರಗತಿ ನಡೆಸಿ ಪರೀಕ್ಷೆ ಬರೆಯಲು ಅವಕಾಶ ಸಿಗಲಿದೆ. ಮುಂದಿನ ವರ್ಷ ಬೇಕಾದ ಕಾಲೇಜು ಆಯ್ಕೆ ಮಾಡಬಹುದು ಎಂದರು.
ಮುಸ್ಲಿಂ ಮುಖಂಡರ ಸಭೆ :
ಹಿಜಾಬ್ ವಿವಾದ ಕುರಿತಂತೆ ಮುಸ್ಲಿಂ ಮುಖಂಡರ ಸಭೆ ನಡೆದಿದೆ. ಮುಸ್ಲಿಂ ಮುಖಂಡ ಜಿ.ಎ ಭಾವ ಅವರ ಜೊತೆ ಬೆಂಗಳೂರಿನಿಂದ ಬಂದಿದ್ದ ಮುಸ್ಲಿಂ ಮುಖಂಡರು ಚರ್ಚಿಸಿದ್ದಾರೆ. ಸರ್ಕಾರದ ವರದಿ ನಂತರ ಶಾಲಾಭಿವೃದ್ಧಿ ಸಮಿತಿ ನಿರ್ಧಾರ ಕೈಗೊಳ್ಳಲಿದೆ.
ಸಣ್ಣ ವಿಚಾರ ದೊಡ್ಡದು ಮಾಡಬಾರದು ಎಂದು ಮುಸ್ಲಿಂ ಮುಖಂಡರಲ್ಲಿ ವಿನಂತಿ ಮಾಡಿದ್ದೇವೆ. ಈ ಬಗ್ಗೆ ಪೋಷಕರು ವಿದ್ಯಾರ್ಥಿಗಳ ಜೊತೆ ಚರ್ಚಿಸಿ ನಿರ್ಧಾರ ತಿಳಿಸುವುದಾಗಿ ಜಿ.ಎ ಭಾವ ಹೇಳಿದರು.
ಇನ್ನು ಒಂದು ತಿಂಗಳಷ್ಟೇ ತರಗತಿ ಇದೆ ಆ ಬಳಿಕ ಪರೀಕ್ಷೆ, ಅಲ್ಲಿಯವರೆಗ ಹಿಜಾಬ್ ಹಾಕಿ ಬರಲು ಅವಕಾಶ ಇಲ್ಲ, ಆನ್ ಲೈನ್ ತರಗತಿಯಲ್ಲಿ ಪಾಲ್ಗೊಳ್ಳಲು ಅವಕಾಶ ಇದೆ. ಯಾರದ್ದೋ ಕುಮ್ಮಕ್ಕಿನಿಂದ ವಿದ್ಯಾರ್ಥಿನಿಯರ ಭವಿಷ್ಯ ಹಾಳಾಗಬಾರದು ಎಂದು ಪೋಷಕರಲ್ಲಿ ಶಾಸಕ ರಘುಪತಿ ಭಟ್ ಮನವಿ ಮಾಡಿಕೊಂಡರು.