ತುಮಕೂರು, ನ.26: ಬೆಂಗಳೂರಿನಲ್ಲಿ ಕಂಬಳ ಮುಗಿಸಿ ಹಿಂತಿರುಗುತ್ತಿದ್ದ ಕಾರಿಗೆ ತುಮಕೂರು ಜಿಲ್ಲೆಯ ಕುಣಿಗಲ್ ನಲ್ಲಿ ಲಾರಿ ಡಿಕ್ಕಿಯಾಗಿದ್ದು ಜವರಾಯನ ಅಟ್ಟಹಾಸಕ್ಕೆ ಮಂಗಳೂರು ಮೂಲದ ಇಬ್ಬರು ಯುವಕರು ಪ್ರಾಣ ತೆತ್ತಿದ್ದಾರೆ.
ಬೋರ್ವೆಲ್ ಲಾರಿ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಸ್ಥಳದಲ್ಲೇ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ, ಮೂರು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಲಾರಿ ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕುಣಿಗಲ್ ತಾಲ್ಲೂಕಿನ ಚಿಗಣಿ ಪಾಳ್ಯ ಬಳಿ ಘಟನೆ ನಡೆದಿದೆ.
ರಾಜ್ಯ ಹೆದ್ದಾರಿ 33ರಲ್ಲಿ ಘಟನೆ ನಡೆದಿದ್ದು, ಕೊತ್ತಗೆರೆ ಹೋಬಳಿ ಚಿಗಣಿಪಾಳ್ಯ ಗ್ರಾಮದ ಬಳಿ ಈ ದುರಂತ ಘಟನೆ ಸಂಭವಿಸಿದೆ. ಬೆಂಗಳೂರಿನಲ್ಲಿ ಶನಿವಾರ ನಡೆಯುತ್ತಿದ್ದ ಕಂಬಳವನ್ನು ನೋಡಿಕೊಂಡು ತಮ್ಮ ಊರಿಗೆ ವಾಪಸಾಗುತ್ತಿದ್ದ ವೇಳೆ ಕುಣಿಗಲ್ ಕಡೆಯಿಂದ ತುಮಕೂರು ಕಡೆಗೆ ಹೋಗುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಕಿಶಾನ್ ಶೆಟ್ಟಿ ಮತ್ತು ಸ್ನೇಹಿತರು ನೆಲಮಂಗಲ ಮತ್ತು ಕುಣಿಗಲ್ ಮಾರ್ಗವಾಗಿ ಮಂಗಳೂರಿಗೆ ಹೋಗಬೇಕಾಗಿದ್ದವರು ದಾರಿ ತಪ್ಪಿ ತುಮಕೂರು ನಗರಕ್ಕೆ ಹೋಗಿದ್ದಾರೆ. ಬಳಿಕ ಹೆಬ್ಬೂರು ಮಾರ್ಗವಾಗಿ ಕುಣಿಗಲ್ ನಿಂದ ಮಂಗಳೂರಿಗೆ ಹೋಗುವ ಸಂದರ್ಭ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ನಿತೀಶ ಭಂಡಾರಿ, ಪ್ರೀತಿ ಲೋಬೊ, ಹರೀಶ್ ಎಂಬವರು ತೀವ್ರ ಗಾಯಗಳೊಂದಿಗೆ ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Discussion about this post